ಬೆಂಗಳೂರು : ವಿಶ್ವದಲ್ಲೇ ಅತ್ಯಂತ ವೇಗದ ಎಸೆತ ಹಾಕಿದ ದಾಖಲೆ ಹೊಂದಿರುವ ಪಾಕಿಸ್ತಾನದ ಶೋಯಬ್ ಅಖ್ತರ್ ಕನ್ನಡಿಗ ರಾಬಿನ್ ಉತ್ತಪ್ಪರಿಗೆ ಬೀಮರ್ ಹಾಕುವ ಬೆದರಿಕೆಯೊಡ್ಡಿದ್ದನ್ನು ಕನ್ನಡಗ ನೆನಪಿಸಿಕೊಂಡಿದ್ದಾರೆ.
5 ಪಂದ್ಯಗಳ ಸರಣಿಯನ್ನಾಡಲು ಪಾಕಿಸ್ತಾನ 2007ರಲ್ಲಿ ಭಾರತಕ್ಕೆ ಬಂದಿತ್ತು. ಆ ಸರಣಿಯಲ್ಲಿ ಉತ್ತಪ್ಪ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ, ಅವರು 5 ಪಂದ್ಯಗಳಲ್ಲಿ ಕೇವಲ 31 ರನ್ಗಳಿಸಿದ್ದರು. ಅವರ ಬೆಸ್ಟ್ ಸ್ಕೋರ್ 19 ಆಗಿತ್ತು.
ಆದರೆ, ನಂತರ ಭಾರತ ತಂಡದಿಂದ ಹೊರಬಿದ್ದ ಅವರಿಗೆ ಮತ್ತೊಂದು ಅವಕಾಶ ಸಿಗಲೇ ಇಲ್ಲ. ಆದರೆ, ಈ ಸರಣಿಯ ವೇಳೆ ನಡೆದ ಸ್ವಾರಸ್ಯಕರ ಸಂಗತಿಯನ್ನು ರಾಬಿನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
"2007ರ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆಲ್ಲಲು 25 ಎಸೆತಗಳಲ್ಲಿ 12 ರನ್ ಗಳಿಸಬೇಕಿತ್ತು. ಈ ಸಂದರ್ಭದಲ್ಲಿ ನಾನು ಮತ್ತು ಇರ್ಫಾನ್ ಪಠಾಣ್ ಬ್ಯಾಟಿಂಗ್ ಮಾಡುತ್ತಿದ್ದೆವು. ಆ ವೇಳೆ ಅಖ್ತರ್ ನನಗೆ ಯಾರ್ಕರ್ ಎಸೆದಿದ್ದರು ಎಂದು ನನಗೆ ನೆನಪಿದೆ.
ಆದ್ರೆ, ಆ ಎಸೆತವನ್ನು ದಂಡಿಸುವಲ್ಲಿ ನಾನು ವಿಫಲನಾದೆ. ನೇರವಾಗಿ ಬಂದ ಆ ಎಸೆತವನ್ನು ಡಿಫೆಂಡ್ ಮೂಲಕ ತಡೆಯುವಲ್ಲಿ ಯಶಸ್ವಿಯಾದೆ. ಆ ಎಸೆತದ 154ರ ವೇಗದಲ್ಲಿತ್ತು. ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದ್ದೆ. ನಂತರ ನಮಗೆ ಗೆಲ್ಲಲು 3 ಅಥವಾ 4 ರನ್ ಬೇಕಾಗಿದ್ದವು.
ಈಗ ನನ್ನಲ್ಲಿಯೇ, ಮುಂದಿನ ಎಸೆತವನ್ನು ಬೌಂಡರಿ ಬಾರಿಸಿ ಗೆಲ್ಲಿಸಬೇಕು, ಅಖ್ತರ್ ಎಸೆತವನ್ನು ದಂಡಿಸುವ ಅವಕಾಶ ಎಷ್ಟುಬಾರಿ ಸಿಗುತ್ತದೆ ಎಂದುಕೊಂಡು ಮುಂದಿನ ಎಸೆತವನ್ನು ನಾನು ಬೌಂಡರಿ ಬಾರಿಸಿದ್ದೆ. ನಾವು ಆ ಪಂದ್ಯದಲ್ಲಿ ಗೆಲುವು ಸಾಧಿಸಿದ್ದೆವು.
ನಂತರದ ಪಂದ್ಯಕ್ಕಾಗಿ ಗ್ವಾಲಿಯರ್ಗೆ ತೆರಳಿದ್ದೆವು, ನನಗೆ ನೆನಪಿದೆ ನಾವೆಲ್ಲರೂ ಒಟ್ಟಿಗೆ ಊಟ ಮುಗಿಸಿದ್ದೆವು . ಈ ವೇಳೆ ನನ್ನ ಬಳಿಗೆ ಬಂದ ಶೋಯೆಬ್ ಅಖ್ತರ್, "ರಾಬಿನ್ ನೀವು ಚೆನ್ನಾಗಿ ಆಡಿದ್ರಿ. ಒಳ್ಳೆಯ ಪಂದ್ಯ. ಆದ್ರೆ, ಒಂದು ವಿಷಯ, ನೀವು ಇಂದು ನನಗೆ ನಡೆದು ಬಂದು ದಂಡಿಸಿದ್ರಿ.
ಆದರೆ, ಮತ್ತೆ ನೀವು ಹಾಗೆ ಮಾಡಿದರೆ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಚೆಂಡು ನೇರವಾಗಿ ನಿಮ್ಮ ತಲೆಯ ಮೇಲೆ ಬೀಳಬಹುದು ಎಂದರು" ಈ ಘಟನೆಯ ನಂತರ ನಾನು ಅವರ ಬೌಲಿಂಗ್ನಲ್ಲಿ ಮುಂದೆ ಬಂದು ಆಡುವ ಧೈರ್ಯ ಮಾಡಲಿಲ್ಲ ಎಂದು ವೇಕ್ ಅಪ್ ವಿತ್ ಸೌರಭ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಈ ಸರಣಿಯನ್ನು ಭಾರತ 3-2ರಲ್ಲಿ ಗೆಲುವು ಸಾಧಿಸಿತ್ತು. ಟೆಸ್ಟ್ ಸರಣಿಯ 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು.
ಇದನ್ನು ಓದಿ:ಈ ಕಾರಣದಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ವೈಟ್ ಬಾಲ್ ಸರಣಿ ರದ್ದು?