ಡರ್ಹಮ್: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದು, ಕೋವಿಡ್ ಟೆಸ್ಟ್ನಲ್ಲೂ ಕೂಡ ನೆಗೆಟಿವ್ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಂತರ ಬಿಡುವಿನ ವೇಳೆಯಲ್ಲಿ ಪಂತ್ ಯುರೋ ಕಪ್ ವೀಕ್ಷಣೆಗೆ ತೆರಳಿದ್ದರು. ಹಾಗಾಗಿ ಟೆಸ್ಟ್ ತಂಡಕ್ಕೆ ಸೇರಿಕೊಳ್ಳುವ ಮುನ್ನ ನಡೆಸಿದ ಕೋವಿಡ್ ಟೆಸ್ಟ್ನಲ್ಲಿ ಪಂತ್ಗೆ ಪಾಸಿಟಿವ್ ದೃಢಪಟ್ಟಿತ್ತು. ನಂತರ ಅವರ ಸ್ನೇಹಿತನ ಮನೆಯಲ್ಲಿಯೇ 10 ದಿನಗಳ ಕಾಲ ಐಸೋಲೋಸನ್ಗೆ ಒಳಗಾಗಿದ್ದರು. ಇದೀಗ 10 ದಿನಗಳ ಐಸೊಲೇಶನ್ ಮುಗಿದಿದ್ದು, ಕೋವಿಡ್ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ರಿಷಭ್ ಪಂತ್ ಕೋವಿಟ್ ಟೆಸ್ಟ್ನಲ್ಲಿ ನೆಗೆಟಿವ್ ಪಡೆದಿದ್ದು, ಮಂಗಳವಾರ(ಜುಲೈ 20) ಡರ್ಹಮ್ ಬಯೋಬಬಲ್ ಸೇರಿಕೊಳ್ಳಲಿದ್ದಾರೆ. ಆದರೆ ಅವರು ಡರ್ಹಮ್ ತಂಡದ ವಿರುದ್ಧ ನಡೆಯುವ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ.
ಪ್ರಸ್ತುತ ಭಾರತ ತಂಡದ ಆಟಗಾರರೆಲ್ಲಾ ಡರ್ಹಮ್ನಲ್ಲಿದ್ದಾರೆ. ಇನ್ನು ಥ್ರೋಡೌನ್ ಸ್ಪೆಷಲಿಸ್ಟ್ ದಯಾನಂದ್ ಗರಾನಿಗೂ ಕೂಡ ಪಾಸಿಟಿವ್ ದೃಢಪಟ್ಟಿದ್ದು, ಅವರು ಕೂಡ ಹೋಟೆಲ್ನಲ್ಲಿ ಐಸೊಲೇಟ್ ಆಗಿದ್ದಾರೆ. ಇವರ ಜೊತೆಯಲ್ಲಿ ನೇರ ಸಂಪರ್ಕದಲ್ಲಿದ್ದ ಕಾರಣ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕೂಡ ಐಸೋಲೇಷನ್ಗೆ ಒಳಗಾಗಿದ್ದು, ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಭಾರತ ತಂಡದ ಮುಖ್ಯ ಕೋಚ್ ಆಗಲು ದ್ರಾವಿಡ್ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ : ಅಗರ್ಕರ್