ಮುಂಬೈ: ಸತತ 2 ಸೋಲುಗಳ ನಂತರ ಅದ್ಬುತವಾಗಿ ಕಮ್ಬ್ಯಾಕ್ ಮಾಡಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅನುಪಸ್ಥಿತಿಯಲ್ಲಿ ಶುಕ್ರವಾರ ಬಲಿಷ್ಠ ಕೆಕೆಆರ್ ವಿರುದ್ಧ ಸೆಣಸಾಡಲಿದೆ. ಟೂರ್ನಮೆಂಟ್ ಆರಂಭದಲ್ಲಿ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ನಂತರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಟೂರ್ನಿಯಲ್ಲಿ ಅಜೇಯರಾಗುಳಿದಿದ್ದ ಗುಜರಾತ್ ಟೈಟನ್ಸ್ ತಂಡವನ್ನು ಬಗ್ಗುಬಡಿದಿರುವ ಹೈದರಾಬಾದ್ ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ.
ಆದರೆ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಿದ್ದ ವಾಷಿಂಗ್ಟನ್ ಸುಂದರ್ ಗಾಯದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕ ಮತ್ತು 4 ವಿಕೆಟ್ ಪಡೆದಿದ್ದರು. ಈಗಾಗಲೇ ಕೋಚ್ ಟಾಪ್ ಮೂಡಿ ಸುಂದರ್ ಅವರು ಕಡಿಮೆ ಅಂದರೂ 2 -3 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇವರ ಜಾಗಕ್ಕೆ ಕನ್ನಡಿಗರಾದ ಜಗದೀಶ್ ಸುಚಿತ್ ಅಥವಾ ಶ್ರೇಯಸ್ ಗೋಪಾಲ್ ಕಣಕ್ಕಿಳಿಯಲಿದ್ದಾರೆ.
ಇನ್ನು ಆರಂಭಿಕರಾದ ಅಭಿಷೇಕ್ ಶರ್ಮಾ ಕಳೆದ 2 ಪಂದ್ಯಗಳಲ್ಲಿ 75 ಮತ್ತು 42 ರನ್ ಹಾಗೂ ನಾಯಕ ವಿಲಿಯಮ್ಸನ್ 32 ಮತ್ತು 57 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಉತ್ತಮ ಟಚ್ನಲ್ಲಿರುವ ರಾಹುಲ್ ತ್ರಿಪಾಠಿ ಕಳೆದ ಪಂದ್ಯದಲ್ಲಿ ರಿಟೈರ್ಡ್ ಹರ್ಟ್ ಆಗಿ ವಾಪಸ್ ತೆರಳಿದ್ದರು. ಅವರ ಅನುಪಸ್ಥಿತಿ ನಾಳಿನ ಪಂದ್ಯಕ್ಕೆ ನಿರ್ಣಾಯಕವಾಗಲಿದೆ.
ಇನ್ನುಳಿದಂತೆ ವಿಂಡೀಸ್ನ ನಿಕೋಲಸ್ ಪೂರನ್ ಕಳೆದ ಪಂದ್ಯದಲ್ಲಿ ಫಾರ್ಮ್ಗೆ ಮರಳಿರುವುದು ತಂಡಕ್ಕೆ ಬಲ ತಂದಿದೆ. ಅನುಭವಿ ಐಡೆನ್ ಮಾರ್ಕ್ರಮ್ ತಮ್ಮ ಜವಾಬ್ದಾರಿಯನ್ನು ಕೆಕೆಆರ್ ವಿರುದ್ಧವೂ ನಿರ್ವಹಿಸಿದರೆ ಹ್ಯಾಟ್ರಿಕ್ ಗೆಲುವು ಪಡೆಯಲು ಸಾಧ್ಯವಾಗಲಿದೆ.
ಬೌಲಿಂಗ್ ವಿಭಾಗದಲ್ಲಿ ಮಾರ್ಕೊ ಜಾನ್ಸನ್ ರನ್ ಬಿಟ್ಟುಕೊಡದಿದ್ದರೂ ಎರಡೂ ಪಂದ್ಯಗಳಲ್ಲೂ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಪೇಸರ್ಗಳಾದ ನಟರಾಜನ್ ಮತ್ತು ಭುವನೇಶ್ವರ್ ವಿಕೆಟ್ ಪಡೆದು ನಿರ್ಣಾಯಕ ಪಾತ್ರವಹಿಸಿದ್ದರು. ಆದರೆ ನಾಳಿನ ಪಂದ್ಯದಲ್ಲಿ ಸ್ಪಿನ್ನರ್ಗಳು ಇವರಿಗೆ ಸಾಥ್ ನೀಡಬೇಕಿದೆ.
ಇತ್ತ ಕೆಕೆಆರ್ ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು 2ಸೋಲು ಕಂಡು 2ನೇ ಸ್ಥಾನದಲ್ಲಿದೆ, ಒಂದು ವೇಳೆ ಸನ್ರೈಸರ್ಸ್ ಮಣಿಸಿದರೆ ಮತ್ತೆ ಅಗ್ರಸ್ಥಾನಕ್ಕೆ ಏರಲಿದೆ. ನೈಟ್ರೈಡರ್ಸ್ ಬ್ಯಾಟಿಂಗ್ ಕ್ರಮಾಂಕ ಉತ್ತಮವಾಗಿದೆ,ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ತೀರ ಕಳಪೆಯಾಗಿತ್ತು. ಉಮೇಶ್ ಯಾದವ್ ಮತ್ತು ಕಮಿನ್ಸ್ ದುಬಾರಿಯಾಗಿದ್ದರು. ರಸೆಲ್ ಮತ್ತು ವರುಣ್ ವಕ್ರವರ್ತಿ ಕೂಡ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಉಳಿದಿದ್ದರಲ್ಲಿ ನರೈನ್ ಮಾತ್ರ ಸ್ಥಿರ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಸತತ ವೈಫಲ್ಯ ಅನುಭವಿಸಿರುವ ರಹಾನೆಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿದೆ. ರಸೆಲ್, ಬಿಲ್ಲಿಂಗ್ಸ್ ಮತ್ತು ನಿತೀಶ್ ರಾಣಾರಿಂದ ಶ್ರೇಯಸ್ ಮತ್ತಷ್ಟು ಸ್ಥಿರ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ನ ಕೌಂಟಿಯಲ್ಲಿ ಒಂದೇ ತಂಡದ ಪರ ಆಡಲಿದ್ದಾರೆ ಪೂಜಾರ-ರಿಜ್ವಾನ್