ಅಹಮದಾಬಾದ್: ಅಕ್ಟೋಬರ್ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಏಕದಿನ ಕ್ರಿಕೆಟ್ ಹೆಚ್ಚು ಆಕರ್ಷಕ ಆಗಲು ನಿಯಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು ಎಂದು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಏಕದಿನ ಕ್ರಿಕೆಟ್ ಬದುಕುಳಿಯಲು, ಭವಿಷ್ಯದಲ್ಲಿ ಅದನ್ನು 40 - ಓವರ್‌ಗಳ ಆಟಕ್ಕೆ ಇಳಿಸಬೇಕು ಎಂದು ನಾನು ಭಾವಿಸುತ್ತೇನೆ. ನಾನು ಇದನ್ನು ಹೇಳಲು ಕಾರಣ ಎಂದರೆ ನಾವು 1983 ರಲ್ಲಿ ವಿಶ್ವಕಪ್ ಗೆದ್ದಾಗ ಅದು 60-ಓವರ್ (ಒಂದು ಇನ್ನಿಂಗ್ಸ್) ಪಂದ್ಯವಾಗಿತ್ತು. ನಂತರ ಪ್ರೇಕ್ಷಕರ ಗಮನ ಕಡಿಮೆಯಾದ ಕಾರಣ 50 - ಓವರ್ಗೆ ಇಳಿಸಲಾಯಿತು. ಸಮಯದೊಂದಿಗೆ ಸ್ವರೂಪದ ಬದಲಾವಣೆಯೂ ಮಾಡಬೇಕಾಗುತ್ತದೆ. ಏಕದಿನ ಕ್ರಿಕೆಟ್ ಹೆಚ್ಚು ಸ್ವಾರಸ್ಯವಾಗಲು 40 ಓವರ್ಗೆ ಇಳಿಸುವ ಅಗತ್ಯ ಇದೆ" ಎಂದಿದ್ದಾರೆ.
ಲೀಗ್ ಪಂದ್ಯಗಳು ಚುಕು ಮಾದರಿಯಲ್ಲಿ ಹೆಚ್ಚಾಗಿ ನಡೆಯುತ್ತಿರುಬ ಕಾರಣ ದ್ವಿಪಕ್ಷೀಯ ಸರಣಿಗಳಲ್ಲಿ ಟಿ- 20 ಪಂದ್ಯಗಳನ್ನು ಕಡಿಮೆ ಮಾಡಬೇಕು ಎಂದು ಸಹ ಹೇಳಿದ್ದಾರೆ. "ಟಿ 20 ಸ್ವರೂಪ ಕ್ರಿಕೆಟ್ ವಿಕಸನಕ್ಕೆ ಇಂಜೆಕ್ಷನ್ ರೀತಿ ಪ್ರಮುಖವಾಗಿದೆ. ಇದು ಹಣ ಕೊಡುವ ಹಸುವಿನಂತಿದೆ. ಪ್ರಪಂಚದಾದ್ಯಂತ ಸಾಕಷ್ಟು ದೇಶೀಯ ಲೀಗ್‌ಗಳು ನಡೆಯುವ ಕಾರಣ ದ್ವಿಪಕ್ಷೀಯ ಸರಣಿಗಳಲ್ಲಿ ಟಿ-20 ಮ್ಯಾಚ್ಗಳನ್ನು ಕಡಿಮೆ ಮಾಡುವುದು ಉತ್ತಮ" ಎಂದು ಹೇಳಿದ್ದಾರೆ.
"ನಾವು ಆ ಲೀಗ್‌ಗಳು ನಡೆಯಲು ಹೆಚ್ಚು ಅವಕಾಶ ಮಾಡಿಕೊಡಬೇಕು ಮತ್ತು ಅದರ ನಡುವೆ ವಿಶ್ವಕಪ್ ಅನ್ನು ನಡೆಸಬೇಕು. ಅಗತ್ಯವಿದ್ದರೆ ವಿಶ್ವಕಪ್ಗೂ ಮೊದಲು ಕೆಲವು ದ್ವಿಪಕ್ಷೀಯ ಪಂದ್ಯಗಳನ್ನು ಆಡಿಸಬೇಕು. ಈ ರೀತಿ ಅಂತಾರಾಷ್ಟ್ರೀಯ ಮಾದರಿಯ ಪಂದ್ಯಗಳನ್ನು ಆಯೋಜಿಸುವುದರಿಂದ ಎಲ್ಲ ಮೂರು ಸ್ವರೂಪಗಳನ್ನು ಉಳಿಸಿಕೊಳ್ಳಬಹುದು" ಎಂದು ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡಿದ ಶಾಸ್ತ್ರಿ ಕ್ರಿಕೆಟ್ನ ಮೂಲ ಮಾದರಿ ಹೆಚ್ಚು ಮಹತ್ವ ನೀಡಬೇಕು ಎಂದು ಹೇಳಿದ್ದಾರೆ. "ಟೆಸ್ಟ್ ಕ್ರಿಕೆಟ್ಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಿದೆ. ಅದನ್ನು ಟೆಸ್ಟ್ ಕ್ರಿಕೆಟ್ ಮಾದರಿಯಲ್ಲೇ ಮುಂದುವರೆಸಿಕೊಂಡು ಹೋಗುವ ಅಗತ್ಯ ಇದೆ. ಇದು ಕ್ರಿಕೆಟ್ನ ನಿಜವಾದ ಮಾದರಿಯಾಗಿದೆ. ಭಾರತದೊಳಗೆ ಎಲ್ಲ ಸ್ವರೂಪದ ಕ್ರಿಕೆಟ್ಗೆ ಸ್ಥಾನವಿದೆ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಉಪಖಂಡದಲ್ಲಿ, ವಿಶೇಷವಾಗಿ ಆಸ್ಟ್ರೇಲಿಯಾದಂತಹ ಸ್ಥಳಗಳಲ್ಲಿ ಟೆಸ್ಟ್ ಉಳಿಸುವ ಅಗತ್ಯ ಇದೆ" ಎಂದಿದ್ದಾರೆ.
ಭಾರತದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ಏಕದಿನ ಮಾದರಿಯ ಬದಲಾವಣೆ ಬಗ್ಗೆ ಮಾತನಾಡಿದ್ದು, ಒಡಿಐ ಸ್ವರೂಪವು ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ ಮತ್ತು ಈ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ವಿಶ್ವಕಪ್ ಕೊನೆಯ ಆವೃತ್ತಿಯಾಗಬಹುದು ಎಂದು ಹೇಳಿದ್ದಾರೆ.
"ಏಕದಿನ ಸ್ವರೂಪವು ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ. ನಾವು ಈ ವರ್ಷದ ನಂತರ ಕೊನೆಯ ವಿಶ್ವಕಪ್ ಅನ್ನು ನೋಡಬಹುದು ಅಥವಾ ಅದರ ನಂತರ ಇನ್ನೊಂದು ವಿಶ್ವಕಪ್ ನೋಡಬಹುದು. ಕ್ರಿಕೆಟ್ನ ಮೂಲ ಸ್ವರೂಪವಾದ ಟೆಸ್ಟ್ನ್ನು ಜನರು ನೋಡಲು ಇಷ್ಟಪಡುತ್ತಾರೆ. ಟಿ 20ಯನ್ನು ಮನರಂಜನೆಯ ರೂಪವಾಗಿ ಜನ ನೋಡುತ್ತಾರೆ" ಎಂದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
"ಟೆಸ್ಟ್ ಕ್ರಿಕೆಟ್ ಎಂಬುದು ಕಲಾತ್ಮಕ ಚಲನಚಿತ್ರಗಳಿದ್ದಂತೆ ಮತ್ತು ಟಿ20 ವಾಣಿಜ್ಯ ಸಿನಿಮಾದ ರೀತಿ. ಹೀಗಿರುವಾಗ ಏಕದಿನ ಕ್ರಿಕೆಟ್ ತನ್ನ ಪ್ರಶಸ್ತ್ಯ ಕಳೆದುಕೊಳ್ಳುತ್ತಿದೆ. ಏಕದಿನ ಕ್ರಿಕೆಟ್ ಪ್ರಮುಖ್ಯತೆ ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ ಉದಾಹರಣೆ ಎಂದರೆ ಅತ್ಯುತ್ತಮ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಒಡಿಐಗೆ ನಿವೃತ್ತಿ ಹೇಳಿರುವುದೇ ಸಾಕಲ್ಲವೇ. ಎರಡು ವರ್ಷಗಳಿಗೊಮ್ಮೆ ಟಿ 20 ವಿಶ್ವಕಪ್ ನಡೆಯುತ್ತಿರುವುದು ಸಹ ಏಕದಿನ ದ್ವಿಪಕ್ಷೀಯ ಸರಣಿಗಳು ಕಡಿಮೆಯಾಗಲು ಕಾರಣ ಆಗಿದೆ. ಇದರಿಂದಾಗಿ ಏಕದಿನ ಕ್ರಿಕೆಟ್ ಅಳಿವಿನಂಚಿನಲ್ಲಿದೆ" ಎಂದು ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಿದ ಭಾರತ: ಡ್ರಾದತ್ತ ಆಸೀಸ್ ಎದುರಿನ ಕೊನೆಯ ಪಂದ್ಯ