ಸೆಂಚುರಿಯನ್ : ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಭಾರತ 174 ರನ್ಗಳಿಗೆ ಆಲೌಟ್ ಆಗುವ ಮೂಲಕ ಹರಿಣಗಳಿಗೆ 305 ರನ್ಗಳ ಬೃಹತ್ ಗುರಿ ನೀಡಿದೆ. ಭಾರತ ಕಡಿಮೆ ಮೊತ್ತಕ್ಕೆ ಆಲೌಟ್ ಆದರೂ ನೀಡಿರುವ ಗುರಿಯ ಆಧಾರದ ಮೇಲೆ ಈ ಪಂದ್ಯದಲ್ಲಿ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಹಿಂದಿನ ದಾಖಲೆಗಳನ್ನು ಗಮನಿಸಿದಾಗ ಈ ಪಿಚ್ನಲ್ಲಿ 4 ಅಥವಾ 5ನೇ ದಿನದಂದು ಹೆಚ್ಚು ಬೌನ್ಸ್ ಮತ್ತು ಚಲನೆಯಲ್ಲಿ ಸಾಕಷ್ಟು ಬದಲಾಗುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಭಾರತದಂತಹ ವಿಶ್ವ ಶ್ರೇಷ್ಠ ವೇಗಿಗಳ ಎದುರು ಈ ದಾಖಲೆ ಬೆನ್ನಟ್ಟುವುದು ಅನಾನುಭವಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅಸಾಧ್ಯದ ಕೆಲಸವಾಗಿದೆ.
ಸೆಂಚುರಿಯನ್ನಲ್ಲಿ ಯಶಸ್ವಿ ಚೇಸ್ 251 ರನ್!
ಸೆಂಚುರಿಯನ್ನ ಸೂಪರ್ಸ್ಪೋರ್ಟ್ಸ್ ಪಾರ್ಕ್ನಲ್ಲಿ ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದಿರುವ ಮೊತ್ತ 251 ರನ್. 2000ರ ಇಸ್ವಿಯ ಜನವರಿಯಲ್ಲಿ ಇಂಗ್ಲೆಂಡ್ ವಿಚಿತ್ರ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಎರಡೂ ತಂಡಗಳು ಯಾವುದೇ ರನ್ಗಳಿಸದೆ ತಮ್ಮ ತಲಾ ಒಂದೊಂದು ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡು ಕೇವಲ ಒಂದೇ ಇನ್ನಿಂಗ್ಸ್ ಆಡಿದ್ದವು.
4ನೇ ಇನ್ನಿಂಗ್ಸ್ನಲ್ಲಿ ಗರಿಷ್ಠ ಮೊತ್ತ ಕೂಡ ಇಂಗ್ಲೆಂಡ್ ಹೆಸರಿನಲ್ಲಿಯೇ ಇದೆ. 2019ರಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 376 ರನ್ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ 268 ರನ್ಗಳಿಸಿತ್ತು. ಆದರೆ, ಈ ಪಂದ್ಯವನ್ನು 107 ರನ್ಗಳಿಂದ ಸೋಲುಂಡಿತ್ತು.
ಭಾರತದ ವಿರುದ್ಧ 300ಕ್ಕೂ ಹೆಚ್ಚು ರನ್ ಚೇಸ್ ಅಸಾಧ್ಯ
ಭಾರತ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಒಮ್ಮೆ ಮಾತ್ರ 300ಕ್ಕೂ ಹೆಚ್ಚು ರನ್ಗಳ ಟಾರ್ಗೆಟ್ ನೀಡಿ ಸೋಲು ಕಂಡಿದೆ. ಅದು 44 ವರ್ಷಗಳ ಹಿಂದೆ. 1977ರಲ್ಲಿ ಪರ್ತ್ನಲ್ಲಿ 342 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿ ಬೆನ್ನಟ್ಟಿದ್ದು ಬಿಟ್ಟರೆ ಯಾವುದೇ ತಂಡ ಭಾರತವನ್ನು 300ಕ್ಕೂ ಹೆಚ್ಚು ರನ್ ಚೇಸ್ ಮಾಡಿ ಗೆದ್ದಿರುವ ಇತಿಹಾಸವಿಲ್ಲ. 1987ರ ನಂತರ ಭಾರತದ ವಿರುದ್ಧ ಯಾವುದೇ ತಂಡ 250ಕ್ಕಿಂತ ಹೆಚ್ಚಿನ ಗುರಿಯನ್ನು ಚೇಸ್ ಮಾಡಲು ಸಾಧ್ಯವಾಗಿಲ್ಲ. 1987ರಲ್ಲಿ ಕೊನೆಯ ಬಾರಿ ವೆಸ್ಟ್ ಇಂಡೀಸ್ ಚೇಸ್ ಮಾಡಿ ಗೆದ್ದಿತ್ತು.
300ಕ್ಕೂ ಹೆಚ್ಚು ರನ್ ಗುರಿ 2 ಬಾರಿ ಮಾತ್ರ ಚೇಸ್ ಮಾಡಿರುವ ದ.ಆಫ್ರಿಕಾ
ದಕ್ಷಿಣ ಆಫ್ರಿಕಾ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 2 ಬಾರಿ ಮಾತ್ರ 300ಕ್ಕಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿದೆ. 2008ರಲ್ಲಿ ಪರ್ತ್ ಟೆಸ್ಟ್ನಲ್ಲಿ 414 ಮತ್ತು 2002ರಲ್ಲಿ ಡರ್ಬನ್ ಟೆಸ್ಟ್ನಲ್ಲಿ 340 ರನ್‌ಗಳನ್ನು ಹಿಂಬಾಲಿಸಿ ಗೆದ್ದಿದೆ. ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 211ರನ್‌ಗಳನ್ನು ಮಾತ್ರ ಚೇಸ್ ಮಾಡಿದ ದಾಖಲೆ ಹೊಂದಿದೆ.
ಈ ಎಲ್ಲಾ ದಾಖಲೆಗಳನ್ನು ಗಮನಿಸಿದರೆ ಭಾರತ ನೀಡಿರುವ 305 ರನ್ಗಳ ಗುರಿಯನ್ನು ಪ್ರಸ್ತುತ ಇರುವ ಅನಾನುಭವಿ ತಂಡ ಚೇಸ್ ಮಾಡುವುದು ಅಸಾಧ್ಯ. ಇನ್ನೂ 130 ಓವರ್ಗಳು ಬಾಕಿ ಉಳಿದಿರುವುದರಿಂದ ಕೊಹ್ಲಿ ಪಡೆ ಗೆಲ್ಲುವ ಅವಕಾಶ ಹೆಚ್ಚಿದೆ.
ಇದನ್ನೂ ಓದಿ:ಬ್ಯಾಟಿಂಗ್ ವೈಫಲ್ಯದಿಂದ ಭಾರತ 174ಕ್ಕೆ ಆಲೌಟ್: ದಕ್ಷಿಣ ಆಫ್ರಿಕಾಗೆ 305 ರನ್ಗಳ ಗುರಿ ನೀಡಿದ ಕೊಹ್ಲಿ ಪಡೆ