ಮುಂಬೈ: ಮುಂಬೈ ಇಂಡಿಯನ್ಸ್ ಐಪಿಎಲ್ನ ಅತ್ಯಂತ ಯಶಸ್ವಿ ತಂಡ. ಆದರೆ 2022ರ ಆವೃತ್ತಿಯಲ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲೂ ನಿರಾಶಾದಾಯಕ ಪ್ರದರ್ಶನ ತೋರಿದೆ. ಶ್ರೀಮಂತ ಲೀಗ್ ಇತಿಹಾಸದಲ್ಲಿ 5 ಪ್ರಶಸ್ತಿ ಗೆದ್ದಿರುವ ಈ ತಂಡ, ಪ್ರಸ್ತುತ ಆವೃತ್ತಿಯಲ್ಲಿ ಸತತ ಸೋಲು ಕಂಡಿರುವುದರಿಂದ ವಿಮರ್ಶೆಗೆ ಒಳಗಾಗುತ್ತಿದೆ.
ಆದರೆ, ಐಪಿಎಲ್ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಮುಂಬೈ ಇಂಡಿಯನ್ಸ್ಗೆ ಈ ರೀತಿಯ ಸರಣಿ ಸೋಲುಗಳು ಇದೇ ಮೊದಲೇನಲ್ಲ. ಮೆಗಾ ಹರಾಜು ಎಷ್ಟು ಬಾರಿ ನಡೆದಿದೆಯೋ ಆ ಆವೃತ್ತಿಗಳಲ್ಲಿ ಮುಂಬೈ ತಂಡ ಇಂತಹದ್ದೇ ವೈಫಲ್ಯ ಅನುಭವಿಸಿದೆ.
ತಂಡದಲ್ಲಿ ಸ್ಟಾರ್ ಆಟಗಾರರಿರುವುದರಿಂದ ತಂಡದ ವೈಫಲ್ಯತೆ ಹೆಚ್ಚಾಗಿ ಕಾಣುತ್ತಿಲ್ಲ. ಬ್ಯಾಟಿಂಗ್ ವಿಭಾಗ ಪರವಾಗಿಲ್ಲ ಎನಿಸಿದರೂ, ಬೌಲಿಂಗ್ ತೀರಾ ಸಾಧಾರಣವಾಗಿದೆ. ಹಿಂದಿನ ಕೆಲವು ಆವೃತ್ತಿಗಳಲ್ಲಿ ಬುಮ್ರಾ-ಮಾಲಿಂಗಾ, ನಂತರ ಬುಮ್ರಾ-ಟ್ರೆಂಟ್ ಬೌಲ್ಟ್ ಅದ್ಭುತ ಜೋಡಿಯಾಗದ್ದರು. ರಾಹುಲ್ ಚಹರ್ ಸ್ಪಿನ್ ಬೌಲಿಂಗ್ ವಿಭಾಗವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಆದರೆ ಈ ಬಾರಿ ಬುಮ್ರಾ ಏಕಾಂಗಿಯಾಗಿದ್ದಾರೆ. ಜೊತೆಗೆ ಫಾರ್ಮ್ ಕೂಡ ಹೇಳಿಕೊಳ್ಳುವ ರೀತಿಯಿಲ್ಲ. ವಿದೇಶಿ ಬೌಲರ್ಗಳಾಗಿ ಖರೀದಿಸಿರುವ ಡೇನಿಯಲ್ ಸ್ಯಾಮ್ಸ್ ರನ್ ಬಿಟ್ಟುಕೊಡುವುದರಲ್ಲಿ ದಾರಾಳರಾಗಿದ್ದಾರೆ. ದೇಶಿ ಬೌಲರ್ಗಳಲ್ಲೂ ಅಂತಹ ಉತ್ತಮ ಬೌಲರ್ಗಳನ್ನು ತಂಡ ಹೊಂದಿಲ್ಲ.
ಮೆಗಾ ಹರಾಜು-ಮುಂಬೈ ವೈಫಲ್ಯ!
- 2008ರಲ್ಲಿ ಮೊದಲ ಬಾರಿಗೆ ಮೆಗಾ ಹರಾಜು ನಡೆದಿತ್ತು. ಆ ಬಾರಿಯೂ ಮುಂಬೈ ಇಂಡಿಯನ್ಸ್ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆ ಆವೃತ್ತಿಯಲ್ಲಿ ತಲಾ 7 ಗೆಲುವು ಮತ್ತು ಸೋಲು ಕಂಡು ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿತ್ತು.
- 2013 ರಲ್ಲಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ತಂಡ ನಂತರ 2014 ರ ಮೆಗಾ ಹರಾಜಿನ ನಂತರ ಹೊಸ ತಂಡದೊಡನೆ ಕಣಕ್ಕಿಳಿದು ಸತತ5 ಪಂದ್ಯಗಳಲ್ಲಿ ಪರಾಜಯ ಕಂಡಿತ್ತು. ಆದರೂ ನಂತರ ಉತ್ತಮ ಪ್ರದರ್ಶನ ತೋರಿ ಪ್ಲೇ ಆಫ್ ಪ್ರವೇಶಿಸಿತ್ತಾದರೂ ಸಿಎಸ್ಕೆ ವಿರುದ್ಧ ಎಲಿಮಿನೇಟರ್ನಲ್ಲಿ ಸೋಲು ಕಂಡಿತ್ತು.
- 2015ರ ಆವೃತ್ತಿಯಲ್ಲಿ ಮೆಗಾ ಹರಾಜು ನಡೆಯಲಿಲ್ಲವಾದರೂ ಮುಂಬೈ ತಂಡ ಸತತ 4 ಪಂದ್ಯಗಳಲ್ಲಿ ಸೋಲು ಕಂಡಿತ್ತು. 5ನೇ ಪಂದ್ಯ ಗೆದ್ದ ರೋಹಿತ್ ಪಡೆ 6ನೇ ಪಂದ್ಯವನ್ನು ಕಳೆದುಕೊಂಡಿತ್ತು. ಆದರೆ ನಂತರ ಸತತ 8 ಪಂದ್ಯ ಗೆದ್ದು ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಲ್ಲದೆ 2ನೇ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.
- 2018ರಲ್ಲಿ ಮೆಗಾ ಹರಾಜು ನಡೆದಿತ್ತು. ಆ ಬಾರಿಯೂ ಮುಂಬೈ ಇಂಡಿಯನ್ಸ್ ಸತತ 3 ಸೋಲು ಕಂಡಿತ್ತು. 3 ಬಾರಿ ಚಾಂಪಿಯನ್ ಆಗಿದ್ದ ಮುಂಬೈ ಆ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. ಇದೀಗ 2022ರ ಮೆಗಾ ಹರಾಜಿನ ನಂತರ ಮುಂಬೈ ಇಂಡಿಯನ್ಸ್ ಸತತ 4 ಸೋಲು ಕಂಡಿದೆ.
ಮುಂಬೈ ವೈಫಲ್ಯಕ್ಕೂ ಮೆಗಾ ಹರಾಜು ಹೇಗೆ ಕಾರಣ?
ಮೆಗಾ ಹರಾಜಿಗೂ ಮುನ್ನ ತಂಡಗಳು ಸೀಮಿತ ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಹಾಗಾಗಿ ಮುಂಬೈ ತಂಡ ಮೆಗಾ ಹರಾಜಿನ ವರ್ಷದ ಆವೃತ್ತಿಯಲ್ಲಿ ಸುಸಜ್ಜಿತ ತಂಡವನ್ನು ಕಟ್ಟುವಲ್ಲಿ ಪ್ರತಿಬಾರಿಯೂ ವಿಫಲವಾಗುತ್ತದೆ. ಆದರೆ ನಂತರದ ವರ್ಷದ ಆವೃತ್ತಿ ತನ್ನ ಲೋಪದೋಷಗಳನ್ನು ಸರಿಪಡಿಸಿಕೊಂಡು ಚಾಂಪಿಯನ್ ಪಟ್ಟಕ್ಕೇರಿದೆ. ಹಾಗಾಗಿ ಈ ಬಾರಿಯೂ ಕೂಡ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವುದಕ್ಕೆ ಮುಂಬೈ ಎಡವುತ್ತಿದೆ. ಅಲ್ಲದೆ ಜೋಫ್ರಾ ಆರ್ಚರ್ ಆಯ್ಕೆಗೆ ಲಭ್ಯವಿರುವುದಿಲ್ಲ ಎನ್ನುವುದು ಗೊತ್ತಿದ್ದರೂ 8 ಕೋಟಿ ರೂ ವ್ಯಯಮಾಡಿದೆ. ಇದರಿಂದಾಗಿ ಪ್ರಸ್ತುತ ತಂಡದಲ್ಲಿ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವಂತಹ ಬೌಲರ್ ಕೊರತೆ ದೊಡ್ಡದಾಗಿ ಕಾಣುತ್ತಿದೆ.
ಇದನ್ನೂ ಓದಿ:'ರಾವತ್ ಭವಿಷ್ಯದ ಸ್ಟಾರ್': ಆರ್ಸಿಬಿ ನಾಯಕ ಡುಪ್ಲೆಸಿಸ್ ಗುಣಗಾನ