ಪುಣೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಸಂಜೆ ನಡೆಯಲಿರುವ ಹೈವೋಲ್ಟೇಜ್ ಕದನದಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲುಂಡಿದ್ದ ಆರ್‌ಸಿಬಿ ಗೆಲುವಿನ ಹಳಿಗೆ ಮರಳುವುದಕ್ಕೆ ಹಾತೊರೆಯುತ್ತಿದ್ದೆರೆ, ಆರ್‌ಆರ್ ಮೊದಲ ಮುಖಾಮುಖಿ ವೇಳೆ ಕಂಡಿರುವ ಸೋಲಿಗೆ ಸೇಡು ತೀರಿಸಿಕೊಳ್ಳುವ ಆಲೋಚನೆಯಲ್ಲಿದೆ.
ಆರ್‌ಸಿಬಿ ತಾನಾಡಿರುವ 8 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಮತ್ತು 3ರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಆದರೆ, ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಕೇವಲ 68 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿದೆ. ಪ್ಲೇ ಆಫ್ ಕನಸಿನಲ್ಲಿರುವ ಡುಪ್ಲೆಸಿಸ್ ಪಡೆಗೆ ಆ ಸೋಲು ರನ್ರೇಟ್ನಲ್ಲಿ ತೀರಾ ಕೆಳಗಿಳಿಯುವಂತೆ ಮಾಡಿತು.
ತಂಡದ ಬ್ಯಾಟಿಂಗ್ ಬಳಗ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿರುವುದು ಆರ್ಸಿಬಿಗೆ ದೊಡ್ಡ ತಲೆನೋವು. ಅನುಜ್ ರಾವತ್, ವಿರಾಟ್ ಕೊಹ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿದ್ದರೆ, ಡುಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಅಸ್ಥಿರ ಪ್ರದರ್ಶನ ಪ್ರದರ್ಶಿಸುತ್ತಿದ್ದಾರೆ. ತಂಡದ ಮಧ್ಯಮ ಕ್ರಮಾಂಕ ಉತ್ತಮವಾಗಿದ್ದರೂ ಕಳೆದ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ಬಳಗ ಮುಗ್ಗರಿಸಿತ್ತು. ಹಾಗಾಗಿ ರಾಯಲ್ಸ್ನಂಥ ಬಲಿಷ್ಠ ತಂಡದೆದುರು ಕಠಿಣ ಸವಾಲು ಎದುರಿಸಬೇಕಿದೆ.
ರಾಯಲ್ಸ್ ತಂಡದಲ್ಲಿ ಜಾಸ್ ಬಟ್ಲರ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 3 ಶತಕಗಳ ಸಹಿತ 491 ರನ್ಗಳಿಸಿದ್ದಾರೆ. ಜೊತೆಗೆ ನಾಯಕ ಸಾಮ್ಸನ್, ದೇವದತ್ ಪಡಿಕ್ಕಲ್ ಮತ್ತು ಹೆಟ್ಮಾಯರ್ ಕೂಡ ಉತ್ತಮ ಲಯದಲ್ಲಿದ್ದಾರೆ. ಬೌಲ್ಟ್, ಚಾಹಲ್, ಅಶ್ವಿನ್ ಮತ್ತು ಪ್ರಸಿಧ್ ಕೃಷ್ಣ ಒಳಗೊಂಡ ಬೌಲಿಂಗ್ ಘಟಕ ಕೂಡ ರಾಯಲ್ಸ್ ಖಂಡಿತವಾಗಿಯೂ ಬೆಂಗಳೂರು ತಂಡಕ್ಕೆ ದೊಡ್ಡ ಸವಾಲೇ ಸರಿ.
ಆರ್‌ಸಿಬಿ ತಂಡಕ್ಕೆ ಡೆತ್ ಓವರ್ ಸ್ಪೆಷಲಿಸ್ಟ್ ಆಗಿರುವ ಹರ್ಷಲ್ ಪಟೇಲ್ಗೆ ಜೋಶ್ ಹೇಜಲ್ವುಡ್ ಮತ್ತು ಸಿರಾಜ್ ಬೆಂಬಲ ಅಗತ್ಯ. ಶ್ರೀಲಂಕಾದ ಸ್ಪಿನ್ನರ್ ಹಸರಂಗ ಕೂಡ ಪಂದ್ಯ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಮುಖಾಮುಖಿ: ಎರಡೂ ತಂಡಗಳೂ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಆರ್‌ಸಿಬಿ 13-10ರಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಬೆಂಗಳೂರು ಕಳೆದ 5 ಪಂದ್ಯಗಳಲ್ಲೂ ರಾಯಲ್ಸ್ ವಿರುದ್ಧ ಪ್ರಾಬಲ್ಯ ಸಾಧಿಸಿದೆ.
ಇದನ್ನೂ ಓದಿ:ಕೊಹ್ಲಿ ನಂತರ ಐಪಿಎಲ್ನಲ್ಲಿ 6000 ರನ್ಗಳ ಗಡಿ ದಾಟಿದ 2ನೇ ಬ್ಯಾಟರ್ ಶಿಖರ್ ಧವನ್