ಪುಣೆ: ಮುಂಬೈ ಇಂಡಿಯನ್ಸ್ ವಿರುದ್ದ ಶನಿವಾರ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಗೆಲುವಿಗೆ ನೆರವಾದ ಅನುಜ್ ರಾವತ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಯುವ ವಿಕೆಟ್ ಕೀಪರ್ ಬ್ಯಾಟರ್ ಭವಿಷ್ಯದ ಕ್ರಿಕೆಟ್ ಸ್ಟಾರ್ ಎಂದು ಪ್ರಶಂಸಿಸಿದ್ದಾರೆ. ಎಡಗೈ ಬ್ಯಾಟರ್ ರಾವತ್ ನಾಯಕ ಡುಪ್ಲೆಸಿಸ್ ಜೊತೆಗೆ ಆರ್ಸಿಬಿ ಪರ ಈ ಆವೃತ್ತಿಯಲ್ಲಿ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ ಅವರಿಂದ ಮೊದಲ ಮೂರು ಪಂದ್ಯಗಳಲ್ಲಿ ಹೇಳಿಕೊಳ್ಳುವ ಪ್ರದರ್ಶನ ಕಂಡುಬಂದಿರಲಿಲ್ಲ.
ಆದರೆ, 22 ವರ್ಷದ ಯುವ ಕ್ರಿಕೆಟಿಗ ಮುಂಬೈ ವಿರುದ್ಧ 47 ಎಸೆತಗಳಲ್ಲಿ 66 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಈ ವಿಚಾರವಾಗಿ ಮಾತನಾಡಿದ ಪ್ಲೆಸಿಸ್, ಅವರು (ಅನುಜ್) ಬ್ಯಾಟಿಂಗ್ ಮಾಡಿದ ರೀತಿ ತುಂಬಾ ಸುಂದರವಾಗಿತ್ತು. ಆತ ಭವಿಷ್ಯದ ಅತ್ಯುತ್ತಮ ಕ್ರಿಕೆಟಿಗ. ಆಟದಲ್ಲಿ ಉದ್ದೇಶವನ್ನು ತೋರುತ್ತಾರೆ, ಭವಿಷ್ಯಕ್ಕೆ ಉತ್ತಮ ಕ್ರಿಕೆಟಿಗ. ಪ್ರಸ್ತುತ ಅವರು ನಮಗೆ ಅತ್ಯುತ್ತಮ ಅಸ್ತ್ರವಾಗಿಯೂ ಕಾಣಿಸುತ್ತಿದ್ದಾರೆ ಎಂದರು.
ರಾವತ್, ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ಪರ ಕೆಕೆಆರ್ ವಿರುದ್ಧ ಪದಾರ್ಪಣೆ ಮಾಡಿ ಡಕ್ ಔಟ್ ಆಗಿದ್ದರು. ಅದು ಅವರ ಏಕೈಕ ಐಪಿಎಲ್ ಪಂದ್ಯವಾಗಿತ್ತು. 2017-18ರಲ್ಲಿ ಡೆಲ್ಲಿ ಪರ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ ಅವರ ನೈಜ ಪ್ರದರ್ಶನ ನಂತರದ ಆವೃತ್ತಿಯಲ್ಲಿ ಹೊರಬಂದಿತ್ತು. 183 ಎಸೆತಗಳಲ್ಲಿ 134 ರನ್ ಸಿಡಿಸಿ ಡೆಲ್ಲಿ ಗೆಲುವಿಗೆ ನೆರವಾಗಿದ್ದರು. ಸಯ್ಯದ್ ಮುಸ್ತಾಕ್ ಅಲಿ ಮತ್ತು ವಿಜಯ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕೆ ಯುವ ಕ್ರಿಕೆಟಿಗನನ್ನು ಆರ್ಸಿಬಿ ಮೆಗಾ ಹರಾಜಿನಲ್ಲಿ 3.4 ಕೋಟಿ ರೂಗಳಿಗೆ ಖರೀದಿಸಿತ್ತು.
ಇದನ್ನೂ ಓದಿ:ಕೊಹ್ಲಿ-ಪ್ಲೆಸಿಸ್ ಜೊತೆಗಿನ ಬ್ಯಾಟಿಂಗ್ ಆನಂದಿಸುವೆ: ಅನುಜ್ ರಾವತ್