ನವದೆಹಲಿ: ಏಷ್ಯಾ ಕಪ್ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, 5 ತಿಂಗಳ ಬಳಿಕ ಸಕ್ರಿಯ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಯ್ಕೆಯಾಗಿದ್ದರು. ಆದರೆ, ಇದಕ್ಕೂ ಮೊದಲು ಅವರು ಫಿಟ್ನೆಸ್ ಸಾಬೀತುಪಡಿಸಲು ರಣಜಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
ಕ್ರಿಕೆಟ್ನಿಂದ ದೀರ್ಘ ದೂರ ಉಳಿದಿರುವ ಜಡೇಜಾರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಂಪೂರ್ಣ ಫಿಟ್ ಎಂದು ಘೋಷಿಸಬೇಕು ಆಸೀಸ್ ಸರಣಿಗೆ ಆಯ್ಕೆಯಾಗಿರುವ ಜಡೇಜಾ ಎನ್ಸಿಎಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೊದಲು ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗಿದೆ.
ರಣಜಿಯಲ್ಲಿ ಫಿಟ್ನೆಸ್ ಸಾಬೀತು: ಎನ್ಸಿಎಯಲ್ಲಿ ಅಭ್ಯಾಸದ ಜೊತೆಗೆ ಕೆಲ ರಣಜಿ ಪಂದ್ಯಗಳಲ್ಲಿ ಭಾಗವಹಿಸಿ, ಅಲ್ಲಿ ಫಿಟ್ನೆಸ್ ಸಾಬೀತು ಮಾಡಬೇಕಿದೆ. ಜಡೇಜಾ ರಣಜಿ ಪಂದ್ಯಗಳನ್ನು ಆಡಲು ಎನ್‌ಸಿಎ ಮತ್ತು ಬಿಸಿಸಿಐ ಒಪ್ಪಿಗೆ ನೀಡಿದೆ. ಸೌರಾಷ್ಟ್ರ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲು ಜಡೇಜಾ ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ಎಡಗೈ ಬ್ಯಾಟರ್, ಬೌಲರ್ ಆಗಿರುವ ಜಡೇಜಾ, ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ತಂಡ ಸೇರಿಕೊಂಡಿದ್ದಾರೆ. ಜಡೇಜಾ ಮತ್ತು ಆರ್.ಅಶ್ವಿನ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಲ ನೀಡಿದರೆ, ಸ್ಪಿನ್ ದಾಳಿ ಕೂಡ ನಡೆಸಲಿದ್ದಾರೆ. 2016-17ರಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು. ದ್ವಿಪಕ್ಷೀಯ ಸರಣಿಯಲ್ಲಿ ಭಾರತ 2-1ರಲ್ಲಿ ಸರಣಿ ಜಯಿಸಿತ್ತು. ಧರ್ಮಶಾಲಾದಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಜಡೇಜಾ 63 ರನ್‌ಗಳ ಜೊತೆಗೆ ನಾಲ್ಕು ವಿಕೆಟ್ ಪಡೆದು ಆಲ್ರೌಂಡರ್ ಆಟ ಪ್ರದರ್ಶಿಸಿದ್ದರು.
ಆ ಸರಣಿಯಲ್ಲಿ ಜಡೇಜಾ ಒಟ್ಟಾರೆ 25 ವಿಕೆಟ್‌ಗಳನ್ನು ಪಡೆದರೆ, 127 ರನ್ ಗಳಿಸಿದರು. ಇದರಿಂದ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. 2017 ರಿಂದ ಜಡೇಜಾ 19 ಟೆಸ್ಟ್‌ಗಳನ್ನು ಆಡಿದ್ದು, 21.46 ಸರಾಸರಿಯಲ್ಲಿ 82 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದಲ್ಲದೇ 2 ಶತಕ ಹಾಗೂ 7 ಅರ್ಧಶತಕಗಳ ಸಮೇತ 52.82 ಸರಾಸರಿಯಲ್ಲಿ 898 ರನ್ ಗಳಿಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಮುಖ್ಯವಾಗಿದೆ.
ಜೂನ್‌ನಲ್ಲಿ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಲು ಭಾರತ ಸರಣಿಯನ್ನು 3-1 ರಲ್ಲಿ ಗೆಲ್ಲಲೇಬೇಕಿದೆ. ಆಸ್ಟ್ರೇಲಿಯಾ ಕೂಡ ಸರಣಿಯನ್ನು ಗೆಲ್ಲುವ ಮೂಲಕ ಫೈನಲ್ ಟಿಕೆಟ್ ಖಚಿತಡಿಸಿಕೊಳ್ಳಲು ಸಜ್ಜಾಗಿದೆ. ಒಂದು ವೇಳೆ ಸೋತರೂ ಆಸೀಸ್ ತಂಡ ಫೈನಲ್ಗೆ ಬರಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅಂಡರ್-19 ಮಹಿಳಾ ಟಿ20 ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ