ದುಬೈ : ಟಿ20 ವಿಶ್ವಕಪ್ ಟೂರ್ನಿಗೆ ಇನ್ನೂ ನಾಲ್ಕು ದಿನ ಬಾಕಿ ಇದೆ. ಎಲ್ಲಾ ತಂಡಗಳು ಕಪ್ ಗೆಲ್ಲುವುದಕ್ಕೆ ಬರದ ಸಿದ್ಧತೆ ನಡೆಸಿವೆ. ಈ ಟಿ20 ವಿಶ್ವಕಪ್ ಟೂರ್ನಿಯನ್ನ ಇನ್ನೂ ಜನಪ್ರಿಯ ಮಾಡಲು ಐಸಿಸಿ ಹೊಸ ಯೋಜನೆಯೊಂದನ್ನ ರೂಪಿಸಿದೆ.
'T20worldcup.com'ನಲ್ಲಿ ಹಲವು ಕ್ರಿಕೆಟ್ ಆಟಗಾರರ ಸಂದರ್ಶನ ಮಾಡುತ್ತಿದೆ. ಹಾಗೆಯೇ ಅಫ್ಘಾನಿಸ್ತಾನದ ಸ್ಟಾರ್ ಬೌಲರ್ ರಶೀದ್ ಖಾನ್ರನ್ನ ಸಂದರ್ಶನ ಮಾಡಿದ್ದು, ಇದರಲ್ಲಿ ವಿಶ್ವದ ಟಾಪ್-5 ಟಿ-20 ಆಟಗಾರರನ್ನು ಆಯ್ಕೆ ಮಾಡಲು ತಿಳಿಸಲಾಗಿತ್ತು. ಇದರಲ್ಲಿ ರಶೀದ್ ಭಾರತದ ಇಬ್ಬರು ಆಟಗಾರರನ್ನ ಸೇರಿ ಐದು ಜನರನ್ನ ಆಯ್ಕೆ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಂಬರ್ ಒನ್ ಸ್ಥಾನ ನೀಡಿದ್ದಾರೆ. ರಶೀದ್ ಅವರ ಲಿಸ್ಟ್ನಲ್ಲಿ ಮೂವರು ಟಾಪ್ ಕ್ವಾಲಿಟಿ ಬ್ಯಾಟರ್ಗಳಿದ್ದರೆ, ಇಬ್ಬರು ಆಲ್-ರೌಂಡರ್ಗಳಿದ್ದಾರೆ.
ವಿರಾಟ್ ಯಾವತ್ತೂ ಪಿಚ್ ಹೇಗಿದೆ ಅಂತಾ ಯೋಚನೆ ಮಾಡುವುದಿಲ್ಲ. ಪಿಚ್ ಹೇಗೇ ಇರಲಿ ಅವರು ರನ್ ಗಳಿಸುತ್ತಾರೆ. ಅವರನ್ನು ತಡೆಯುವುದು ಬಹಳ ಕಷ್ಟ’ ಎಂದಿದ್ದಾರೆ. ಪುರುಷರ ಟಿ-20 ಕ್ರಿಕೆಟ್ನಲ್ಲಿ ವಿರಾಟ್ ಅತ್ಯಧಿಕ ರನ್ ಗಳಿಸಿರುವ ಹೆಗ್ಗಳಿಕೆ ಹೊಂದಿದ್ದಾರೆ. ಈವರೆಗೆ ಆಡಿರುವ 90 ಪಂದ್ಯಗಳಿಂದ 52.65 ಸರಾಸರಿ ಮತ್ತು 139.04 ಸ್ಟ್ರೈಕ್ ರೇಟ್ನಲ್ಲಿ 3,159 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಯಮ್ಸನ್ ಅವರನ್ನು ರಶೀದ್ 2ನೇ ಸ್ಥಾನದಲ್ಲಿಟ್ಟಿದ್ದಾರೆ. ಕೇನ್ ಅವರ ಶಾಂತ ಮನೋಭಾವ ತಂಡದ ಎಲ್ಲ ಸದಸ್ಯರಲ್ಲಿ ನಿರಾತಂಕ ಭಾವವನ್ನು ಸೃಷ್ಟಿಸುತ್ತದೆ ಎಂದು ರಶೀದ್ ಹೇಳಿದ್ದಾರೆ. ಕೇನ್, ಟಿ-20 ಪಂದ್ಯಗಳಲ್ಲಿ 31ರ ಸರಾಸರಿಯಲ್ಲಿ 1,805 ರನ್ ಗಳಿಸಿದ್ದಾರೆ.
ರಶೀದ್ ಲಿಸ್ಟ್ನಲ್ಲಿರುವ 3ನೇ ಟಾಪ್ ಬ್ಯಾಟರ್ ಎಂದರೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಿಸ್ಟರ್ 360 ಎಬಿ ಡಿ ವಿಲ್ಲಿಯರ್ಸ್. ‘ಎಬಿಡಿ ವಿನಾಶಕಾರಿ ಬ್ಯಾಟ್ಸ್‌ಮನ್. ತಮ್ಮ ತಂಡ ಎಂತಹ ಸ್ಥಿತಿಯಲ್ಲಿದ್ದರೂ ರನ್ ಗಳಿಸುವ ಸಾಮರ್ಥ್ಯ ಅವರಲ್ಲಿದೆ.
ಅಷ್ಟು ಮಾತ್ರವಲ್ಲ ಎದುರಾಳಿ ತಂಡದ ಬೌಲರ್ನ ಎಷ್ಟೇ ಸ್ಟಾರ್ ಪಟ್ಟ ಹೊಂದಿದ್ದರು, ಅವರನ್ನ ಚಚ್ಚದೆ ಬಿಡಲಾರರು ಎಬಿಡಿ. ಕ್ಯಾಪ್ಟನ್ ಯಾರೇ ಆಗಿರಲಿ, ಎಬಿಡಿ ತನ್ನ ತಂಡದಲ್ಲಿರುವುದನ್ನು ಇಷ್ಟಪಡುತ್ತಾರೆ ಎಂದು ರಶೀದ್ ಹೇಳಿದ್ದಾರೆ.
ಆಲ್-ರೌಂಡರ್ಗಳ ಪಟ್ಟಿಯಲ್ಲಿ ರಶೀದ್ ಭಾರತದ ಹಾರ್ದಿಕ್ ಪಾಂಡ್ಯ ಮತ್ತು ವೆಸ್ಟ್ ಇಂಡೀಸ್‌ನ ಪೋಲ್ಲಾರ್ಡ್ ಅವರನ್ನ ಆಯ್ಕೆ ಮಾಡಿದ್ದಾರೆ. ‘ಕೊನೆಯ 4-5 ಓವರ್ಗಳಲ್ಲಿ ಗೆಲ್ಲಲು 80-90 ರನ್‌ಗಳ ಅವಶ್ಯಕತೆಯಿದ್ದರೆ ಗಳಿಸುವ ಸಾಮರ್ಥ್ಯ ಹಾರ್ದಿಕ್ ಮತ್ತು ಪೋಲ್ಲಾರ್ಡ್ರಲ್ಲಿದೆ. ಅವರ ಮೇಲೆ ಭಾರ ಹಾಕಿ ಕ್ಯಾಪ್ಟನ್ ನಿಶ್ಚಿಂತೆಯಿಂದ ಇರಬಹುದು. ಅದಕ್ಕಾಗಿಯೇ ಹಾರ್ದಿಕ್ ಮತ್ತು ಪೋಲ್ಲಾರ್ಡ್ ನನ್ನ ಆಯ್ಕೆಯಾಗಿದ್ದಾರೆ ಎಂದು ರಶೀದ್ ಹೇಳಿದ್ದಾರೆ.