ಅಬುಧಾಬಿ(ಯುಎಇ): ಟಿ20 ವಿಶ್ವಕಪ್ನಲ್ಲಿ ಭಾರತ ವೈಫಲ್ಯ ಅನುಭವಿಸಿದ ಬಳಿಕ ನಾಯಕತ್ವದ ಬದಲಾವಣೆಗೆ ತೀವ್ರ ಒತ್ತಡ ಕೇಳಿಬರುತ್ತಿದೆ. ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟಲು ಹಲವು ಲೆಜೆಂಡರಿ ಆಟಗಾರರು ಸೂಚಿಸಿದ್ದಾರೆ. ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಕೂಡ ಪಾಂಡ್ಯ ಅವರ ನಾಯಕತ್ವದ ಗುಣಗಳನ್ನು ಶ್ಲಾಘಿಸಿದ್ದು, ಭಾರತ ತಂಡವನ್ನು ಮುನ್ನಡೆಸುವ ಕೌಶಲ್ಯವನ್ನು ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಭಾರತ ತಂಡದ ಬಗ್ಗೆ ಮಾಧ್ಯಮವೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಶೀದ್ ಖಾನ್, ನಾನು, ಪಾಂಡ್ಯ ಐಪಿಎಲ್ನ ಗುಜರಾತ್ ಟೈಟನ್ಸ್ ತಂಡದಲ್ಲಿ ಒಟ್ಟಿಗೆ ಆಡಿದ್ದೇವೆ. ಪಾಂಡ್ಯ ತಂಡವನ್ನು ಮುನ್ನಡೆಸಿದ ರೀತಿ ಅಭಿನಂದನಾರ್ಹ. ಅತ್ಯುತ್ತಮ ನಾಯಕತ್ವ ಕೌಶಲ್ಯವನ್ನು ಅವರು ಪ್ರದರ್ಶಿಸಿದರು ಎಂದರು.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಿದ ಕಾರಣ, ಅವರ ನಾಯಕತ್ವದ ಗುಣಗಳು ಮತ್ತು ತಂಡವನ್ನು ಮುನ್ನಡೆಸುವ ಕೌಶಲ್ಯಗಳ ಬಗ್ಗೆ ಅರಿತಿದ್ದೇನೆ. ಇದು ಭಾರತ ತಂಡಕ್ಕೆ ನೆರವಾಗಲಿದೆ. ಬಿಸಿಸಿಐ ತಂಡದ ನಾಯಕತ್ವವನ್ನು ಸೂಚಿಸುತ್ತದೆಯಾದರೂ, ಪಾಂಡ್ಯ ಉತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟರು.
ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಂಡದ ನೇತೃತ್ವದ ವಹಿಸಿದ್ದರು. 3 ಪಂದ್ಯಗಳಲ್ಲಿ ಮಳೆಯಾಟದಿಂದ 1-0 ಯಲ್ಲಿ ಸರಣಿ ಭಾರತ ಗೆದ್ದುಕೊಂಡಿತು. ಈ ಮೂಲಕ ತಾವು ತಂಡದ ನಾಯಕನಾಗಲು ಫಿಟ್ ಎಂಬುದನ್ನು ಹಾರ್ದಿಕ್ ಸಮರ್ಥಿಸಿಕೊಂಡರು.
ಇದನ್ನೂ ಓದಿ: ಭಾರತ-ಬಾಂಗ್ಲಾ ಮೊದಲ ಏಕದಿನ ಇಂದು: ಮುಂದಿನ ವಿಶ್ವಕಪ್‌ಗೆ ರೋಹಿತ್ ಟೀಂ ತಾಲೀಮು