ಕರಾಚಿ : ಪಾಕಿಸ್ತಾನದ ಮಾಜಿ ಟೆಸ್ಟ್ ನಾಯಕ ಹಾಗೂ ಪ್ರಸಿದ್ಧ ಕಾಮೆಂಟೇಟರ್ ರಮೀಜ್ ರಾಜಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ರಾಜಾ ಮಾಧ್ಯಮಗಳ ಕರೆ ಮತ್ತು ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪಿಸಿಬಿ ಮುಖ್ಯ ಪೋಷಕರಾಗಿರುವ ಮಾಜಿ ನಾಯಕ ಮತ್ತು ಪಾಕಿಸ್ತಾನ ಪಿಎಂ ಇಮ್ರಾನ್ ಖಾನ್ ಹಾಲಿ ಅಧ್ಯಕ್ಷ ಮಣಿ ಅವರ ಅಧಿಕಾರ ವಿಸ್ತರಣೆಯ ವಿರುದ್ಧ ನಿಂತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇನ್ನು, ಕೆಲವು ದಿನಗಳಲ್ಲಿ ಪ್ರಧಾನಮಂತ್ರಿ ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ಹೆಸರುಗಳನ್ನು ಗವರ್ನಿಂಗ್ ಬೋರ್ಡ್ಗೆ ಸೂಚಿಸಲಿದ್ದಾರೆ. ಇವರಿಬ್ಬರಲ್ಲಿ ಸದಸ್ಯರು ಒಬ್ಬರ ಹೆಸರನ್ನು ಆಯ್ಕೆ ಮಾಡಲಿದ್ದಾರೆ ಎಂದು ಪಿಸಿಬಿ ಮೂಲ ತಿಳಿಸಿದೆ.
ಅದೇ ಮೂಲದ ಪ್ರಕಾರ ರಮೀಜ್ ರಾಜಾ ಆ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಆದರೆ, ಇನ್ನು ಖಚಿತವಾಗಿಲ್ಲ. ಯಾರೇ ಅಧ್ಯಕ್ಷ ಹುದ್ದೆಗೇರಬೇಕಾದರು ಅವರನ್ನು ಇಮ್ರಾನ್ ಖಾನ್ ನೇಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ರಮೀರ್ ರಾಜಾ ಪಾಕಿಸ್ತಾನದ ಪರ 57 ಪಂದ್ಯಗಳಲ್ಲಿ 2833 ರನ್ ಮತ್ತು 198 ಏಕದಿನ ಪಂದ್ಯಗಳಿಂದ 5841 ರನ್ ಬಾರಿಸಿದ್ದಾರೆ.