ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದ್ದ ಭಾರತ ತಂಡ ಆ್ಯಂಡರ್ಸನ್ ದಾಳಿಗೆ ದಿಢೀರ್ ಕುಸಿತ ಕಂಡಿದೆ. ಆದರೆ ಕನ್ನಡಿಗ ರಾಹುಲ್ ಅರ್ಧಶತಕ ಸಿಡಿಸಿ ಭಾರತಕ್ಕೆ ಆಸರೆಯಾಗಿದ್ದಾರೆ.
ಮೊದಲ ದಿನ ಇಂಗ್ಲೆಂಡ್ ತಂಡವನ್ನು ಕೇವಲ 183 ರನ್ಗಳಿಗೆ ಕಟ್ಟಿ ಹಾಕಿದ್ದ ಭಾರತ, ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಔಟಾಗದೇ 21 ರನ್ಗಳಿಸಿತ್ತು. ಇಂದು ಎರಡನೇ ದಿನ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ(36) ಮತ್ತು ರಾಹುಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 97ರನ್ ಸೇರಿಸಿದರು.
107 ಎಸೆತಗಳಲ್ಲಿ 6 ಬೌಂಡರಿ ಸಹಿತ 36 ರನ್ಗಳಿಸಿದ್ದ ರೋಹಿತ್ ಶರ್ಮಾರನ್ನು ರಾಬಿನ್ಸನ್ ಔಟ್ ಮಾಡುವ ಮೂಲಕ ಇಂಗ್ಲೆಂಡ್ಗೆ ಬ್ರೇಕ್ ನೀಡಿದರು. ಆದರೆ, ಆರಂಭಿಕ ಜೋಡಿ ಮುರಿದು ಬೀಳುತ್ತಿದ್ದಂತೆ ಭಾರತ ತಂದ ಕೇವಲ 8 ರನ್ಗಳ ಅಂತರದಲ್ಲಿ ಚೇತೇಶ್ವರ್ ಪೂಜಾರ(4) ವಿರಾಟ್ ಕೊಹ್ಲಿ (0) ಮತ್ತು ಅಜಿಂಕ್ಯ ರಹಾನೆ(5) ವಿಕೆಟ್ ಕಳೆದುಕೊಂಡಿತು.
ಪೂಜಾರ ಮತ್ತು ಕೊಹ್ಲಿ ಸತತ ಎರಡು ಎಸೆತಗಳಲ್ಲಿ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಅಜಿಂಕ್ಯ ರಹಾನೆ ಇಲ್ಲದ ರನ್ ಕದಿಯಲು ಯತ್ನಿಸಿ ರನ್ಔಟ್ ಆದರು.
2 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಮರಳಿರುವ ಕನ್ನಡಿಗ ಕೆಎಲ್ ರಾಹುಲ್ 148 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 57 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಇವರಿಗೆ ಜೊತೆಯಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ 7 ರನ್ಗಳಿಸಿದ್ದಾರೆ.
2ನೇ ದಿನದಾಟದಲ್ಲಿ ಮಳೆ ಆರಂಭವಾಗಿದ್ದು ಆಟ ಸ್ಥಗಿತಗೊಂಡಿದೆ. ಭಾರತ 46.1 ಒವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 125 ರನ್ಗಳಿಸಿದೆ.
ಇದನ್ನು ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್: ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ ಜೇಮ್ಸ್ ಆ್ಯಂಡರ್ಸನ್