ದುಬೈ: ಕನ್ನಡಿಗ ಕೆಎಲ್ ರಾಹುಲ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಚೆನ್ನೈ ನೀಡಿದ್ದ 135 ರನ್ಗಳ ಗುರಿಯನ್ನು ಕೇವಲ 13 ಓವರ್ಗಳಲ್ಲಿ ಮುಗಿಸಿದೆ.
135 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ ಇನ್ನೂ 42 ಎಸೆತಗಳು ಉಳಿದಿರುವಂತೆ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸ್ಫೋಟಕ ಬ್ಯಾಟಿಂಗ್ ಮಾಡಿದ ರಾಹುಲ್ ಕೇವಲ 42 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 98 ರನ್ಗಳಿಸಿ ಪಂಜಾಬ್ ಗೆಲುವಿನ ರೂವಾರಿಯಾದರು.
ಮಯಾಂಕ್ ಅಗರ್ವಾಲ್ 12, ಶಾರುಕ್ ಖಾನ್ 8 ಮತ್ತು ಮಾರ್ಕ್ರಮ್ 13 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ದೀಪಕ್ ಚಹರ್ 1 ವಿಕೆಟ್ ಪಡೆದರು.
ಇನ್ನು ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 136 ರನ್ಗಳಿಸಿತ್ತು. ಆರಂಭಿಕ ಬ್ಯಾಟರ್ ಫಾಫ್ ಡು ಪ್ಲೆಸಿಸ್ 55 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 76 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆಗಿದ್ದರು. ಆದರೆ, ತಂಡದ ಉಳಿದ ಬ್ಯಾಟರ್ಗಳಲ್ಲಿ ಯಾರೊಬ್ಬರು 20ರ ಗಡಿ ದಾಟಲು ಸಾಧ್ಯವಾಗದೇ ಭಾರಿ ವೈಫಲ್ಯ ಅನುಭವಿಸಿದರು.
ಪಂಜಾಬ್ ಕಿಂಗ್ಸ್ ಪರ ಅರ್ಶದೀಪ್ ಸಿಂಗ್ 35ಕ್ಕೆ 2, ಕ್ರಿಸ್ ಜೋರ್ಡನ್ 20ಕ್ಕೆ 2, ರವಿ ಬಿಷ್ಣೋಯ್ 25ಕ್ಕೆ1 ಮತ್ತು ಮೊಹಮ್ಮದ್ ಶಮಿ 22ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿ: ಮುಂದಿನ ವರ್ಷ ನಾನು ಆಡುತ್ತೇನೆಯೇ ಎಂಬುದು ರೀಟೈನ್ ಪಾಲಿಸಿ ಅವಲಂಬಿಸಿದೆ: ಧೋನಿ