ನವದೆಹಲಿ: ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಟ್ರೋಫಿ ಎತ್ತಿ ಹಿಡಿಯಲು ಪ್ರಮುಖ ಪಾತ್ರವಹಿಸಿರುವ ಕೀರನ್ ಪೊಲಾರ್ಡ್ ಮುಂಬೈ ಫ್ರಾಂಚೈಸಿ ಸೇರುವಲ್ಲಿ ತಮ್ಮ ಪಾತ್ರ ಹೇಗಿತ್ತು ಎಂಬುದನ್ನು ಸಿಎಸ್ಕೆ ತಂಡದ ಆಲ್ರೌಂಡರ್ ಮತ್ತು ವಿಂಡೀಸ್ ಮಾಜಿ ನಾಯಕ ಡ್ವೇನ್ ಬ್ರಾವೋ ಬಹಿರಂಗಪಡಿಸಿದ್ದಾರೆ.
ಸ್ವತಃ ಡ್ವೇನ್ ಬ್ರಾವೋ 2008ರಿಂದ 2010ರವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. 2011ರಲ್ಲಿ ಬ್ರಾವೋ ಸಿಎಸ್ಕೆ ಸೇರಿಕೊಂಡ ನಂತರ ಅವರ ಬದಲೀ ಆಟಗಾರನಾಗಿ ಮುಂಬೈ ಹುಡುಕುತ್ತಿದ್ದ ಸಂದರ್ಭದಲ್ಲಿ ಬ್ರಾವೋ ತಾವೇ ಪೊಲಾರ್ಡ್ ಮತ್ತು ಡ್ವೇನ್ ಸ್ಮಿತ್ ಹೆಸರನ್ನು ಫ್ರಾಂಚೈಸಿಗೆ ಶಿಪಾರಸು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ಗೆ ನನ್ನ ಜಾಗಕ್ಕೆ ಆಲ್ರೌಂಡರ್ ಒಬ್ಬರ ಅಗತ್ಯವಿತ್ತು. ನಾನು ಪೊಲಾರ್ಡ್ ಹೆಸರನ್ನು ಸೂಚಿಸಿದೆ. ಅವರು ಪೊಲಾರ್ಡ್‌ರನ್ನು ಸಂಪರ್ಕಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ಆತ ಕ್ಲಬ್ವೊಂದಕ್ಕೆ ಆಡುತ್ತಿದ್ದ. ಹಾಗಾಗಿ ಡ್ವೇನ್ ಸ್ಮಿತ್ ಜೊತೆಗೆ ಆತನನ್ನು ನಾನು ಶಿಪಾರಸು ಮಾಡಿದೆ ಎಂದು ಬ್ರಾವೋ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ನಂತರದ ವರ್ಷದಲ್ಲಿ ಚಾಂಪಿಯನ್ ಲೀಗ್ ನಡೆಯುತ್ತಿತ್ತು. ಆ ವೇಳೆ ನಾನು ರಾಹುಲ್ ಸಾಂಘ್ವಿಯನ್ನು ಕರೆದು, ಪೊಲಾರ್ಡ್ ಇಲ್ಲಿದ್ದಾರೆ. ಟೂರ್ನಮೆಂಟ್ ಆರಂಭಕ್ಕೂ ಮುನ್ನ ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳಿ ಎಂದು ತಿಳಿಸಿದೆ. ರಾಹುಲ್ ಮತ್ತು ರಾಬಿನ್ ಸಿಂಗ್ ಮುಂಬೈನಿಂದ ಹೈದರಾಬಾದ್ಗೆ ಬಂದರು.
ಆ ಸಮಯದಲ್ಲಿ ಅವರು 2,00,000 ಅಮೆರಿಕನ್ ಡಾಲರ್ ಒಪ್ಪಂದ ಮಾಡಿಕೊಳ್ಳಲು ಬಂದಿದ್ದರು ಎಂಬುದನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಪೊಲಾರ್ಡ್‌ರನ್ನು ಕರೆದು ಇಬ್ಬರನ್ನು ಭೇಟಿ ಮಾಡಿಸಿದೆ. ಅವರು(ಪೊಲಾರ್ಡ್) ಒಪ್ಪಂದವನ್ನು ನೋಡಿದರು ನಿಬ್ಬೆರಗಾಗಿ 'ಡ್ವೇನ್ ನೀವು ಸೀರಿಯಸ್ ಆಗಿ ಹೇಳ್ತಾಯಿದ್ದೀರಾ? " ಎಂದು ನನಗೆ ಕೇಳಿದ್ದರು ಎಂದು ಬ್ರಾವೋ ಪೊಲಾರ್ಡ್ ಮುಂಬೈ ಸೇರಿದ ಕಥೆಯನ್ನು ವಿವರಿಸಿದ್ದಾರೆ.
2010ರಲ್ಲಿ ಪೊಲಾರ್ಡ್‌ರನ್ನು 3.47 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಇದೀಗ ಅವರು 11 ಆವೃತ್ತಿಗಳಲ್ಲಿ ಫ್ರಾಂಚೈಸಿ ಪರ ಆಡಿದ್ದಾರೆ. 5 ಬಾರಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಒಟ್ಟಾರೆ 171 ಪಂದ್ಯಗಳಿಂದ 150ರ ಸ್ಟ್ರೈಕ್ ರೇಟ್ನಲ್ಲಿ 3,191 ರನ್ ಗಳಿಸಿದ್ದಾರೆ.
ಇದನ್ನು ಓದಿ:2021ರ ಐಪಿಎಲ್ ಪುನಾರಂಭವಾದರೂ ನಾನು ಆಡುವುದಿಲ್ಲ: ಬೆನ್ ಸ್ಟೋಕ್ಸ್