ಐಪಿಎಲ್ ಅಂದ್ರೇನೆ ಬೌಂಡರಿ, ಸಿಕ್ಸರ್ಗಳ ರಸದೌತಣ. ಚುಟುಕು ಕ್ರಿಕೆಟ್ನಲ್ಲಿ ಆಟಗಾರ ಅಬ್ಬರಿಸಿದರೆ, ಅಭಿಮಾನಿಗಳ ಕೇಕೆಗೆ ಪಾರವೇ ಇರುವುದಿಲ್ಲ. ಈ ರೀತಿ ಆಡುವ ಭರದಲ್ಲಿ ಸೊನ್ನೆ (ಡಕೌಟ್)ಗೆ ಔಟಾದ ಖ್ಯಾತನಾಮರು ಕಡಿಮೆ ಏನಿಲ್ಲ. ಬಾಲ್ ಅನ್ನು ಬೆಂಡೆತ್ತುವ ಅವಸರದಲ್ಲಿ ತಾನೇ ಔಟಾಗಿ ಪೇಚು ಮೋರೆ ಹಾಕಿಕೊಂಡವರು ಹಲವರು. ಐಪಿಎಲ್ ಇತಿಹಾಸದಲ್ಲಿಯೇ ಅತ್ಯಧಿಕ ಸಾರಿ ಸೊನ್ನೆಗೆ ಔಟಾದವರ ಪಟ್ಟಿ ಹೀಗಿದೆ ನೋಡಿ..
ಐಪಿಎಲ್ ಚರಿತ್ರೆಯಲ್ಲಿ ಒಟ್ಟು ಆರು ಮಂದಿ ಆಟಗಾರರು ಅತ್ಯಧಿಕವಾಗಿ ಅಂದರೆ 13 ಬಾರಿ ಡಕೌಟ್ ಆದವರಿದ್ದಾರೆ. ಅವರಲ್ಲಿ ದೂಸ್ರಾ ಸ್ಪೆಷಲಿಸ್ಟ್ ಹರ್ಭಜನ್ ಸಿಂಗ್, ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಪಿಯೂಷ್ ಚಾವ್ಲಾ ಮತ್ತು ಟಿ20 ಕ್ರಿಕೆಟ್ಗೆ ಹೆಸರಾದ, ಭಾರತ ತಂಡದ ನಾಯಕ ರೋಹಿತ್ ಶರ್ಮಾ. ಇವರಲ್ಲಿ ಕೆಲವರು ಓಪನರ್ ಆಗಿ ಬಂದು ಔಟ್ ಆದರೆ, ಇನ್ನು ಕೆಲವರು ಕೊನೆಯಲ್ಲಿ ನಾಮ್ ಕೇವಾಸ್ತೇ ಬ್ಯಾಟ್ ಬೀಸಿ ಔಟಾಗಿದ್ದಾರೆ.
ರೋಹಿತ್ ಶರ್ಮಾ: ಡ್ಯಾಶಿಂಗ್ ಓಪನರ್ ಎಂದೇ ಖ್ಯಾತಿಯಾದ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಮುಂಬೈ ತಂಡವನ್ನು ಪ್ರತಿನಿಧಿಸುವ ರೋಹಿತ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ್ದಾರೆ. ಅಲ್ಲದೇ, 213 ಪಂದ್ಯಗಳಲ್ಲಿ 5611 ರನ್ ಮಾಡಿದ ಸಾಧನೆ ಇವರದು. ಇಂತಹ ದಾಂಡಿಗ ಐಪಿಎಲ್ನಲ್ಲಿಯೇ ಅತ್ಯಧಿಕ ಸಲ ಸೊನ್ನೆ ಸುತ್ತಿದ್ದ ಮೊದಲ ಬ್ಯಾಟರ್ ಆಗಿದ್ದಾರೆ. 13 ಬಾರಿ ಡಕೌಟ್ ಆಗಿ ನಿರಾಸೆ ಉಂಟುಮಾಡಿದ ಕೆಟ್ಟ ದಾಖಲೆ ಇವರ ಹೆಸರಿಗಿದೆ.
ಅಂಬಟಿ ರಾಯುಡು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಟಿ ರಾಯುಡು ಕೂಡ 13 ಸಲ ಸೊನ್ನೆ ಸುತ್ತಿದ್ದಾರೆ. 2018 ರಲ್ಲಿ ಚೆನ್ನೈ ತಂಡದ ಪ್ರಮುಖ ಬ್ಯಾಟರ್ ಆಗಿ ಕಾಣಿಸಿಕೊಂಡ ರಾಯುಡು 29.44 ರ ಸರಾಸರಿಯಲ್ಲಿ ಬ್ಯಾಟ್ ಬೀಸಿ ಒಟ್ಟಾರೆ 3916 ರನ್ ಗಳಿಸಿದ್ದಾರೆ. ಆದರೆ, 13 ಬಾರಿಯ ಡಕೌಟ್ ಕಳಪೆ ಸಾಧನೆ ಇವರದಾಗಿದೆ.
ಅಜಿಂಕ್ಯಾ ರಹಾನೆ: ರಾಜಸ್ತಾನ ರಾಯಲ್ಸ್ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಅಜಿಂಕ್ಯಾ ರಹಾನೆ ಕೂಡ 13 ಬಾರಿ ಐಪಿಎಲ್ನಲ್ಲಿ ಸೊನ್ನೆ ಸುತ್ತಿದ್ದಾರೆ. ಚುಟುಕು ಕ್ರಿಕೆಟ್ನಲ್ಲಿ 151 ಮ್ಯಾಚ್ ಆಡಿರುವ ರಹಾನೆ, 31.52ರ ಸರಾಸರಿಯಲ್ಲಿ 3941 ರನ್ ಬಾರಿಸಿದ್ದಾರೆ.
ಪಾರ್ಥಿವ್ ಪಟೇಲ್: ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನೂ ಪ್ರತಿನಿಧಿಸಿದ ಆಟಗಾರ. ಪಾರ್ಥಿವ್ ಐಪಿಎಲ್ನಲ್ಲಿ 2848 ರನ್ ಗಳಿಸಿದ್ದರೂ, ಆರಂಭಿಕನಾಗಿ ಬಂದು 13 ಬಾರಿ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗದೇ ಔಟಾದ ಕಳಪೆ ಸಾಧನೆ ಮಾಡಿದ್ದಾರೆ.
ಗೌತಮ್ ಗಂಭೀರ್: ದೆಹಲಿ ಸಂಸದರಾಗಿ ರಾಜಕೀಯದಲ್ಲಿರುವ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 2 ಬಾರಿ ಚಾಂಪಿಯನ್ ಕಿರೀಟ ತೊಡಿಸಿದ್ದಾರೆ. ಇಂತಹ ಆಟಗಾರ ಕೂಡ 12 ಬಾರಿ ಒಂದೂ ರನ್ ಗಳಿಸದ ಅಪಖ್ಯಾತಿಗೆ ಒಳಗಾಗಿದ್ದಾರೆ. ಅಲ್ಲದೇ, 2014 ರ ಒಂದೇ ಸೀಸನ್ನಲ್ಲಿ ಗಂಭೀರ್ 3 ಬಾರಿ ಡಕೌಟ್ ಆಗಿ ಅಭಿಮಾನಿಗಳನ್ನು ನಿರಾಸೆ ಮಾಡಿದ್ದಾರೆ. ಐಪಿಎಲ್ನಲ್ಲಿ 4217 ರನ್ ಗಳಿಸಿದ್ದಾರೆ.
ಇವರಲ್ಲದೇ, ಪಿಯೂಷ್ ಚಾವ್ಲಾ, ಮನ್ದೀಪ್ ಸಿಂಗ್, ಕರ್ನಾಟಕದ ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ ಕೂಡ 12 ಬಾರಿ ಡಕೌಟ್ ಆದ ಅಪಖ್ಯಾತಿ ಸುಳಿಗೆ ಸಿಲುಕಿದ್ದಾರೆ. ಇನ್ನು ಮಾರ್ಚ್ 26 ರಿಂದ ಐಪಿಎಲ್ನ 15 ನೇ ಅವತರಣಿಕೆ ಆರಂಭವಾಗಲಿದೆ.
ಇದನ್ನೂ ಓದಿ: Ipl 2022 : ಮೊಣಕೈ ಗಾಯದಿಂದ ಸೂಪರ್ ಜೈಂಟ್ಸ್ ತಂಡದಿಂದ ಹೊರಗುಳಿಯಲಿರುವ ಮಾರ್ಕ್ವುಡ್