ಲಾಹೋರ್: ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್‌ಗೆ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯ ಬೆನ್ನಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಬುಧವಾರ ಏಷ್ಯನ್ ಕ್ರಿಕೆಟ್ ಮಂಡಳಿ ತುರ್ತು ಸಭೆ ಕರೆಯುವಂತೆ ಮನವಿ ಮಾಡಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ನಲ್ಲಿ ಚರ್ಚಿಸದೇ ಅಧಿಕೃತ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ಇದು ಭಾರತದಲ್ಲಿ ನಡೆಯಲಿರುವ 2023ರಲ್ಲಿ ವಿಶ್ವಕಪ್ ಮೇಲೂ ಪರಿಣಾಮ ಬೀರಲಿದೆ. ಹಾಗೆಯೇ ಮುಂದಿನ 2024 ರಿಂದ 2031 ರವರೆಗಿನ ಪಂದ್ಯಗಳ ಮೇಲೂ ಸಮಸ್ಯೆ ಆಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದಾರೆ. ಹೀಗಾಗಿ, ಪಿಸಿಬಿ ಹಾಗು ಎಸಿಸಿಯಲ್ಲಿ ಚರ್ಚಿಸದೇ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಸಾಧ್ಯವಾದಷ್ಟು ಬೇಗ ಸಭೆ ಕರೆದು ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪಿಸಿಬಿ ಮನವಿ ಮಾಡಿದೆ.
ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ಗೂ ಮುನ್ನ ಪಾಕಿಸ್ತಾನದಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾ ಕಪ್ ನಡೆಯಲಿದೆ. ಈ ಬಾರಿ ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಲಂಕಾದ ಆರ್ಥಿಕ ಬಿಕ್ಕಟ್ಟಿನ ಕಾರಣ ಯುಎಇ ಆತಿಥ್ಯ ವಹಿಸಿತ್ತು.
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಏಷ್ಯಾ ಮತ್ತು ಐಸಿಸಿ ನಡೆಸುವ ಟೂರ್ನಮೆಂಟ್ಗಳನ್ನು ಬಿಟ್ಟು ದ್ವಿಪಕ್ಷೀಯ ಸರಣಿಗಳು ಸಡೆಯುತ್ತಿಲ್ಲ. 2008ರಲ್ಲಿ ಭಾರತ ಪಾಕಿಸ್ತಾನಕ್ಕೆ ದ್ವಿಪಕ್ಷೀಯ ಸರಣಿಗೆ ತೆರಳಿತ್ತು ಮತ್ತು ಪಾಕಿಸ್ತಾನ 2012 -13 ರಲ್ಲಿ ಭಾರತಕ್ಕೆ ಬಂದಿದ್ದು ಕೊನೆಯ ದ್ವಿಪಕ್ಷೀಯ ಪಂದ್ಯವಾಗಿದೆ.
ಇದನ್ನೂ ಓದಿ: 2023ರ ಏಷ್ಯಾಕಪ್ : ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲ್ಲ- ಜಯ್ ಶಾ