ಲಾಹೋರ್ : ಎರಡು ವರ್ಷಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಗೇರಿದ್ದ ಮಾಜಿ ಕ್ರಿಕೆಟರ್ ಯೂನಿಸ್ ಖಾನ್ ಕೇವಲ ಏಳೇ ತಿಂಗಳಿಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಈ ದಿಢೀರ್ ನಿರ್ಧಾರಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ.
ಪಾಕಿಸ್ತಾನ ತಂಡ ಜುಲೈನಲ್ಲಿ ಸೀಮಿತ ಓವರ್ಗಳ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ನಂತರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಬೇಕಿದೆ. ಆದರೆ, ಈ ಸಂದರ್ಭದಲ್ಲಿ ಯೂನಿಸ್ ಖಾನ್ ನಿರ್ಧಾರ ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. 43 ವರ್ಷದ ಮಾಜಿ ಬ್ಯಾಟ್ಸ್ಮನ್ ಯೂನಿಸ್ 2020ರಿಂದ 2022ರ ಟಿ20 ವಿಶ್ವಕಪ್‌ವರೆಗೆ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದರು.
ಯೂನಿಸ್ ಖಾನ್ ಅವರಂತಹ ಅನುಭವದ ತಜ್ಞರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ. ಸರಣಿ ಚರ್ಚೆಗಳ ನಂತರ ನಾವಿಬ್ಬರೂ ಇಷ್ಟವಿಲ್ಲದಿದ್ದರೂ ಪರಸ್ಪರ ಮತ್ತು ಸೌಹಾರ್ದಯುತವಾಗಿ ವಿಭಿನ್ನ ದಿಕ್ಕುಗಳಲ್ಲಿ ಸಾಗುವ ನಿರ್ಧಾರಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಪಿಸಿಬಿ ಸಿಇಒ ವಾಸೀಮ್ ಖಾನ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
"ಪಾಕಿಸ್ತಾನ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಯುನಿಸ್ ಖಾನ್ ನೀಡಿದ ಅಲ್ಪಾವಧಿಯ ಕೊಡುಗೆಗಳಿಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಉದಯೋನ್ಮುಖ ಕ್ರಿಕೆಟಿಗರೊಂದಿಗೆ ತನ್ನ ಅಪಾರ ಜ್ಞಾನ ಹಂಚಿಕೊಳ್ಳುವ ಮೂಲಕ ಪಿಸಿಬಿ ನೆರವಿಗೆ ಅವರು ಲಭ್ಯವಿರುತ್ತಾರೆಂದು ನಾನು ಭಾವಿಸುತ್ತೇನೆ" ಎಂದು ಖಾನ್ ತಿಳಿಸಿದ್ದಾರೆ.
ಪಾಕಿಸ್ತಾನ ತಂಡ ಬ್ಯಾಟಿಂಗ್ ಕೋಚ್ ಇಲ್ಲದೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆದರೆ, ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಬ್ಯಾಟಿಂಗ್ ಕೋಚ್ ನೇಮಕ ಮಾಡಲಾಗುವುದು ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿ:ಕೋಪ ಕೆಲಸಕ್ಕೆ ಬರಲ್ಲ, ಅದನ್ನು ನಿಯಂತ್ರಿಸಿದ ಮೇಲೆ ನನಗೆ ಯಶಸ್ಸು ಸಿಕ್ಕಿತು: ಬುಮ್ರಾ