ಮೆಲ್ಬೋರ್ನ್: ಡಿಸೆಂಬರ್ನಲ್ಲಿ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ನಡೆಯಲಿದೆ, ಆದರೆ ಆಸ್ಟ್ರೇಲಿಯಾದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಆ ಸರಣಿಗೂ ಮುನ್ನವೇ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
31ವರ್ಷದ ಜೇಮ್ಸ್ ಪ್ಯಾಟಿನ್ಸನ್ ತಮ್ಮ ಕುಟುಂಬಕ್ಕೆ ಹೆಚ್ಚಿನ ಗಮನ ನೀಡುವುದಕ್ಕಾಗಿ ಹಾಗೂ ತಮ್ಮ ರಾಜ್ಯ ತಂಡಕ್ಕೆ ಆಡುತ್ತಾ ಭವಿಷ್ಯದ ಆಟಗಾರರ ಅಭಿವೃದ್ದಿಗೆ ನೆರವಾಗಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಹೆಚ್ಚು ಬಾರಿ ಗಾಯಾಳುವಾಗಿಯೇ ವೃತ್ತಿ ಜೀವನವನ್ನು ಕಳೆದಿದ್ದ ಪ್ಯಾಟಿನ್ಸನ್ ಆಸ್ಟ್ರೇಲಿಯಾ ಪರ 21 ಟೆಸ್ಟ್, 15 ಏಕದಿನ ಪಂದ್ಯ ಹಾಗೂ 4 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 81, 16 ಮತ್ತು 3 ವಿಕೆಟ್ ಪಡೆದಿದ್ದಾರೆ.
ನಾನು ಮುಂಬರುವ ಆ್ಯಶಸ್‌ನಲ್ಲಿ ಆಡಲು ಬಯಸಿದ್ದೆ, ಆದರೆ ನಾನು ಅದಕ್ಕೆ ತಕ್ಕ ಸಿದ್ಧತೆಯನ್ನು ಮಾಡಿಕೊಂಡಿಲ್ಲ, ಒಂದು ವೇಳೆ ನಾನು ಆ್ಯಶಸ್ ತಂಡದ ಭಾಗವಾದರೆ ನನ್ನ ಆಯ್ಕೆಗೆ ಮತ್ತು ತಂಡಕ್ಕೆ ನ್ಯಾಯ ಒದಗಿಸಬೇಕು. ಆದರೆ, ನನ್ನ ದೇಹ ಬ್ಯಾಟಿಂಗ್ ಮಾಡಲು ಶೇ 100 ರಷ್ಟು ಫಿಟ್ನೆಸ್ ಹೊಂದಿಲ್ಲ. ಆದ್ದರಿಂದ ತಂಡದಲ್ಲಿ ಶೇ 100ರಷ್ಟು ಸಾಮರ್ಥ್ಯ ಇಲ್ಲದೇ ಆಡುವುದು ನ್ಯಾಯೋಚಿತವಲ್ಲ ಎಂದು ಪ್ಯಾಟಿನ್ಸನ್ ಬುಧವಾರ ಹೇಳಿದ್ದಾರೆ.
" ನನ್ನಲ್ಲಿ ಇನ್ನು 3ರಿಂದ ನಾಲ್ಕು ವರ್ಷದ ಆಟವಷ್ಟೇ ಉಳಿದಿದೆ. ಈ ಸಂದರ್ಭದಲ್ಲಿ ನಾನು ಗರಿಷ್ಠ ಮಟ್ಟದಲ್ಲಿ ಆಡುವುದರ ಬದಲಾಗಿ ವಿಕ್ಟೋರಿಯಾದ ತಂಡದ ಕಡೆಗೆ ಹೆಚ್ಚಿನ ಗಮನ ನೀಡುತ್ತೇನೆ. ರಾಜ್ಯದ ಯುವ ಆಟಗಾರರ ಬೆಳವಣಿಗೆಗೆ ನೆರವಾಗುತ್ತೇನೆ. ಇಂಗ್ಲೆಂಡ್ನಲ್ಲಿ ಕೆಲವು ಸಮಯ ಕ್ರಿಕೆಟ್ ಆಡಿ, ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೇನೆ" ಎಂದು ಪ್ಯಾಟಿನ್ಸನ್ ಹೇಳಿದ್ದಾರೆ.
ಇದನ್ನು ಓದಿ:ಕೌಟುಂಬಿಕ ದೌರ್ಜನ್ಯ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ಬಂಧನ