ಮುಂಬೈ: 15ನೇ ಆವೃತ್ತಿಯಲ್ಲಿ ತಮ್ಮ ಬೌಲಿಂಗ್ ಸುಧಾರಣೆಗೆ ರಿಷಭ್ ಪಂತ್ ನಾಯಕತ್ವ ಪ್ರಮುಖ ಪಾತ್ರವಹಿಸಿದೆ ಎಂದಿರುವ ಟೀಮ್ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್, ಡೆಲ್ಲಿ ಕ್ಯಾಪಿಟಲ್ಸ್ ನಾಯಕನ ಕೆಲವು ಆಲೋಚನೆಗಳು ಎಂ.ಎಸ್.ಧೋನಿಯ ನಾಯಕತ್ವವನ್ನು ಹೋಲುತ್ತಿವೆ ಎಂದು ತಿಳಿಸಿದ್ದಾರೆ.
27 ವರ್ಷದ ಚೈನಾಮನ್ 2022ರಲ್ಲಿ 13 ವಿಕೆಟ್ ಕಬಳಿಸಿದ್ದಾರೆ. ಕಳೆದ ಎರಡೂ ವರ್ಷಗಳಿಂದ ವಿವಿಧ ಕಾರಣಗಳಿಂದ ಬೆರಳೆಣಿಕೆಯಷ್ಟು ಪಂದ್ಯಗಳನ್ನು ಮಾತ್ರ ಆಡಿರುವ ಕುಲದೀಪ್ ಯಾದವ್ಗೆ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಎಲ್ಲಾ ಪಂದ್ಯಗಳಲ್ಲೂ ಆಡುವ ಅವಕಾಶ ಸಿಕ್ಕಿದೆ. ಕುಲ್ದೀಪ್ ಅಂತಾರಾಷ್ಟ್ರೀಯ ವೃತ್ತಿ ಜೀವನದ ದಿನಗಳಲ್ಲಿ ಅವರ ಯಶಸ್ಸಿನ ಹಿಂದೆ ಧೋನಿ ಇದ್ದರು. ಇದರ ಬಗ್ಗೆ ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇದೀಗ ಪಂತ್ ಕೂಡ ಧೋನಿಯಂತೆಯೇ ತಮಗೆ ನೆರವಾಗುತ್ತಿದ್ದಾರೆ ಎಂದು ಅವರು ಹೇಳಿದರು.
"ರಿಷಭ್ ಪಂತ್ ಸ್ಟಂಪ್ಗಳ ಹಿಂದೆ ನಿಂತು ಧೋನಿಯ ಕೆಲವು ಗುಣಗಳನ್ನು ತೋರಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಿಕೆಟ್ ಕೀಪರ್ಗಳು ಸ್ಪಿನ್ ಬೌಲರ್ಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಈ ಆವೃತ್ತಿಯ ಐಪಿಎಲ್ನಲ್ಲಿ ನನ್ನ ಪ್ರದರ್ಶನದ ಕ್ರೆಡಿಟ್ ಪಂತ್ಗೂ ಸಲ್ಲಬೇಕು" ಎನ್ನುತ್ತಾರೆ ಉತ್ತರ ಪ್ರದೇಶದ ಸ್ಪಿನ್ನರ್.
"ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲು ನಿಮಗೆ ಸ್ವಾತಂತ್ರ್ಯವನ್ನು ನೀಡಿದಾಗ ನೀವು ಎಲ್ಲವನ್ನೂ ಆನಂದಿಸಲು ಪ್ರಾರಂಭಿಸುತ್ತೀರಿ. ನಾನು ಅಭ್ಯಾಸದ ಸಂದರ್ಭದಲ್ಲಿ ರಿಕಿ ಪಾಂಟಿಂಗ್ ಜೊತೆ ಮಾತನಾಡಿದ್ದೇನೆ. ಅವರು ನೀವು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೀರಿ, ನಾನು ಎಲ್ಲಾ 14 ಲೀಗ್ ಪಂದ್ಯಗಳಲ್ಲೂ ಇದನ್ನೇ ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ. ಅವರ ಜೊತೆಗಿನ ಸಂವಾದ ನನ್ನನ್ನು ಮತ್ತಷ್ಟು ಪ್ರೇರೇಪಿಸಿದೆ" ಎಂದು ಡೆಲ್ಲಿ ಕ್ಯಾಪಿಟಲ್ಸ್ ಪೋಡ್ಕಾಸ್ಟ್ನಲ್ಲಿ 2014ರಿಂದ 20121 ರವರೆಗೆ ಕೆಕೆಆರ್ ಪರ ಆಡಿದ್ದ ಸ್ಪಿನ್ನರ್ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ 15ನೇ ಅವೃತ್ತಿಯಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲಾಗುತ್ತಿಲ್ಲ. ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು ಮತ್ತು 4 ಸೋಲು ಕಂಡು ನಿರಾಶೆಯನುಭವಿಸಿದೆ. ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ.
ಇದನ್ನೂ ಓದಿ:ಆರ್ಸಿಬಿಗೆ ಭಾರಿ ಮುಖಭಂಗ: ಎಂಟೇ ಓವರ್ಗಳಲ್ಲಿ ಚೇಸ್ ಮಾಡಿ 2ನೇ ಸ್ಥಾನಕ್ಕೇರಿದ ಹೈದರಾಬಾದ್