ಕರಾಚಿ(ಪಾಕಿಸ್ತಾನ): ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ಗೆ ಜಗತ್ತಿನ ಎಲ್ಲ ಕ್ರಿಕೆಟ್ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈಗಾಗಲೇ ವಿವಿಧೆಡೆ ತಂಡಗಳು ಚುಟುಕು ಕ್ರಿಕೆಟ್ ಸರಣಿಗಳಲ್ಲಿ ಭಾಗಿಯಾಗುತ್ತಿದ್ದು, ತಮ್ಮ ಸಾಮರ್ಥ್ಯವನ್ನು ಒರೆಗಚ್ಚುವ ಕೆಲಸದಲ್ಲಿ ನಿರತವಾಗಿವೆ. ಇದೀಗ ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದೆ.
ಕರಾಚಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಪರಾಕ್ರಮ ಮೆರೆದ ಇಂಗ್ಲೆಂಡ್ 6 ವಿಕೆಟ್ಗಳ ಅಧಿಕಾರಯುತ ವಿಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಪಾಕ್ ಉತ್ತಮ ಆರಂಭ ಪಡೆಯಿತು. ಆದ್ರೆ, ಮಧ್ಯಮ ಕ್ರಮಾಂಕ ದಿಢೀರ್ ಕುಸಿದುತಂಡ 7 ವಿಕೆಟ್ ನಷ್ಟಕ್ಕೆ 158 ರನ್ಗಳಿಸಲಷ್ಟೇ ಶಕ್ತವಾಯಿತು.
ತಂಡದ ಪರ ಆರಂಭಿಕರಾದ ರಿಜ್ವಾನ್ (68) ಮತ್ತು ಕ್ಯಾಪ್ಟನ್ ಬಾಬರ್ ಆಜಂ (31) ರನ್ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ರಿಜ್ವಾನ್ ವಿಕೆಟ್ ಉರುಳುತ್ತಿದ್ದಂತೆ ಇನ್ನುಳಿದ ಯಾವುದೇ ಆಟಗಾರನ ಬ್ಯಾಟ್‌ನಿಂದಲೂ ರನ್ ಹರಿದುಬರಲೇ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ಅಹ್ಮದ್ ಮಾತ್ರ 28 ರನ್ ಸಂಪಾದಿಸಿದರು. ಇನ್ನುಳಿದಂತೆ ಹೈದರ್ ಅಲಿ (11), ಮಸೂದ್ (7), ನವಾಜ್ (4), ಕುಶ್ದಿಲ್(4) ರನ್ ಸೇರಿಸಿದರು.
ಇಂಗ್ಲೆಂಡ್ ಬೌಲಿಂಗ್ನಲ್ಲಿ ಮಿಂಚಿದ್ದು, ಲೂಕಿ ವುಡ್ 3 ವಿಕೆಟ್, ಆದಿಲ್ ರಶೀದ್ 2, ಮೊಯಿನ್ ಹಾಗೂ ಸ್ಯಾಮ್ ಕರ್ರನ್ ತಲಾ 1 ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ: ಭಾರತ ವಿಶ್ವಕಪ್ ತಂಡಕ್ಕೆ ಆಘಾತ: ಮೊದಲ ಟಿ20ಯಲ್ಲಿ ಆಸೀಸ್ಗೆ 4 ವಿಕೆಟ್ ಜಯ
159 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಆರಂಭಿಕ ಹಿನ್ನಡೆ ಉಂಟಾಯಿತು. ಮೊದಲು ಫಿಲಿಪ್ ಸಾಲ್ಟ್ (10) ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ನಲ್ಲಿ ಜತೆಯಾದ ಅಲೆಕ್ಸ್ ಹಾಗೂ ಮಲನ್ ತಂಡಕ್ಕೆ ಚೇತರಿಕೆ ನೀಡಿದರು. 20 ರನ್ಗಳಿಸಿ ಆಡುತ್ತಿದ್ದ ಮಲನ್ ಕೂಡ ಉಸ್ಮಾನ್ ಎಸೆತದಲ್ಲಿ ಔಟಾದರು. ಆದರೆ ಹ್ಯಾರಿ ಬ್ರೂಕ್ಸ್ ಸ್ಫೋಟಕ 42 ರನ್ ಸೇರಿಸಿ ತಂಡಕ್ಕೆ ಗೆಲುವು ತಂದಿಟ್ಟರು. ತಂಡ ಕೊನೆಯದಾಗಿ 19.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ಗಳಿಸಿ ಗೆಲುವಿನ ನಗೆ ಬೀರಿತು.
ಇದರೊಂದಿಗೆ ಏಳು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದ ಮುನ್ನಡೆ ಕಾಯ್ದುಕೊಂಡಿತು. ಪಾಕ್ ಪರ ಉಸ್ಮಾನ್ 2 ವಿಕೆಟ್, ಹ್ಯಾರಿಸ್ ಹಾಗೂ ಧಾನಿ ತಲಾ 1 ವಿಕೆಟ್ ಕಿತ್ತರು.
ಕರಾಚಿ ಕ್ರಿಕೆಟ್ ಮೈದಾನದಲ್ಲಿ ಸೆಪ್ಟೆಂಬರ್ 22, 23 ಮತ್ತು 25 ರಂದು ಮುಂದಿನ ಪಂದ್ಯಗಳು ನಡೆಯಲಿದ್ದು, ಲಾಹೋರ್ನ ಗಡಾಫಿ ಮೈದಾನದಲ್ಲಿ 28, 30 ಹಾಗೂ ಅಕ್ಟೋಬರ್ 2 ರಂದು ಉಳಿದ ಟೀ 20 ಪಂದ್ಯಗಳು ನಿಗದಿಯಾಗಿವೆ.