ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಜಿ ಅಧ್ಯಕ್ಷ ಝಾಕಾ ಅಶ್ರಫ್ 2012ರಲ್ಲಿ ಪಾಕ್ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಆಟಗಾರರ ಜೊತೆ ಅವರ ಪತ್ನಿಯರನ್ನು ಯಾಕೆ ಜೊತೆಗೆ ಕಳುಹಿಸಲಾಗಿತ್ತು ಎಂಬ ಕುತೂಹಲಕರ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
2012ರಲ್ಲಿ ಭಾರತಕ್ಕೆ ಪಾಕ್ ತಂಡ ಪ್ರವಾಸ ಬಂದಾಗ ಆಟಗಾರರ ಜೊತೆ ಅವರ ಪತ್ನಿಯರೂ ಪ್ರವಾಸದ ಭಾಗವಾಗಿದ್ದರು. ಇದಕ್ಕೆ ಕಾರಣ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಆಗಿನ ಅಧ್ಯಕ್ಷರಾಗಿದ್ದ ಝಾಕಾ ಅಶ್ರಫ್. ಆಟಗಾರರ ಪತ್ನಿಯರು ಜೊತೆಗಿದ್ದ ರಹಸ್ಯವನ್ನು ಸ್ವತಃ ಅಶ್ರಫ್ ಅವರೇ ಸಂದರ್ಶನವೊಂದರಲ್ಲಿ ಉಸುರಿದ್ದಾರೆ.
'ಪಾಕ್ ಆಟಗಾರರ ಮೇಲೆ ನಿಗಾ ಇಡಲು ನಾನೇ ಅವರ ಪತ್ನಿಯರನ್ನು ಪ್ರವಾಸಕ್ಕೆ ಕರೆದೊಯ್ಯಲು ಅವಕಾಶ ಮಾಡಿಕೊಟ್ಟೆ. ಪತ್ನಿ ಜೊತೆಗಿದ್ದರೆ ಆಟಗಾರರು ತಪ್ಪು ಹೆಜ್ಜೆ ಇಡದಂತೆ ನೋಡಿಕೊಳ್ಳುತ್ತಾರೆ. ಇದರಿಂದ ವಿನಾಕಾರಣ ವಿವಾದ ಉಂಟಾಗುವುದನ್ನು ತಡೆಯಬಹುದು ಎಂಬುದು ನನ್ನ ದೂರದೃಷ್ಟಿಯಾಗಿತ್ತು ಎಂದು ತಮ್ಮ ಅಂದಿನ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.
ಅಂದಿನ ಪ್ರವಾಸದ ವೇಳೆ ಎಲ್ಲ ಆಟಗಾರರು ಶಿಸ್ತಿನಿಂದ ಇದ್ದರು. ಭಾರತ ನಮ್ಮ ತಂಡ ಮತ್ತು ಆಟಗಾರರನ್ನು ವಿವಾದಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿರುತ್ತದೆ. ಪತ್ನಿಯರು ಜೊತೆಗಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ನಮ್ಮ ಆಟಗಾರರು ಈ ನಿರ್ಧಾರವನ್ನು ಅಚ್ಚುಕಟ್ಟಾಗಿ ಪಾಲಿಸಿದರು ಎಂದು ತಮ್ಮ ನಡೆ ಹೇಳಿಕೊಂಡು ಬೀಗಿದ್ದಾರೆ.
ಪಾಕ್ ಪ್ರವಾಸದ ಬಗ್ಗೆ ಪ್ರಸ್ತಾಪ: 2012 ರ ಪಾಕಿಸ್ತಾನ ಭಾರತ ಪ್ರವಾಸದ ಬಳಿಕ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್. ಶ್ರೀನಿವಾಸನ್, ಭಾರತ ತಂಡಕ್ಕೆ ಸೂಕ್ತ ಭದ್ರತೆ ನೀಡಿದಲ್ಲಿ ಪಾಕ್ ಪ್ರವಾಸ ಮಾಡಲು ನಾವು ಸಿದ್ಧ ಎಂದು ಹೇಳಿದ್ದರು ಎಂದು ಸಂದರ್ಶನದಲ್ಲಿ ಅಶ್ರಫ್ ಹೇಳಿದ್ದಾರೆ. ಕ್ರಿಕೆಟ್ಗೆ ಸಂಬಂಧಿಸಿದಂತೆ ಭಾರತದೊಂದಿಗೆ ಬಾಂಧವ್ಯವನ್ನು ಪುನಃಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಭದ್ರತಾ ಕಾರಣದಿಂದಾಗಿ ಉಭಯ ರಾಷ್ಟ್ರಗಳ ಮಧ್ಯೆ ಕ್ರಿಕೆಟ್ ಸರಣಿ ನಡೆಯುವುದು ನಿಂತು ಹೋಗಿದೆ.
ಇದನ್ನೂ ಓದಿ: ಐಪಿಎಲ್ಗೆ ಮತ್ತೆ ಕೋವಿಡ್ ಬಾಧೆ: ಡೆಲ್ಲಿ ಸಹಾಯಕ ಸಿಬ್ಬಂದಿಗೆ ಸೋಂಕು