ಸೆಂಚುರಿಯನ್( ದಕ್ಷಿಣ ಆಫ್ರಿಕಾ): ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡ ವಿದೇಶದಲ್ಲಿ ಯಶಸ್ವಿಯಾಗಲೂ ತಂಡದ ವೇಗಿಗಳ ಪ್ರದರ್ಶನ ಕಾರಣ ಎಂದಿರುವ ಟೀಮ್ ಇಂಡಿಯಾ ನಾಯಕ ಕೊಹ್ಲಿ, ಮೊಹಮ್ಮದ್ ಶಮಿ ಅವರನ್ನು ವಿಶ್ವದ ಅಗ್ರ ಸೀಮರ್ಗಳಲ್ಲಿ ಒಬ್ಬರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
305 ರನ್ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟರ್ಗಳನ್ನು ಭಾರತದ ಅಸಾಧಾರಣ ಬೌಲಿಂಗ್ ಪಡೆ ಧೂಳೀಪಟ ಮಾಡಿ 113 ರನ್ಗಳ ಗೆಲುವಿಗೆ ಕಾರಣರಾದರು. ಸೆಂಚುರಿಯನ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಗೆಲುವು ಇದಾಗಿತ್ತು. ಈ ಗೆಲುವಿನ ನಂತರ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಸಹ ಆಟಗಾರರನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
" ನಮ್ಮ ತಂಡ ಸವಾಲಿನ ಸಂದರ್ಭದಲ್ಲಿದ್ದಾಗ ಈ ಹುಡುಗರು ಒಟ್ಟಿಗೆ ಬೌಲಿಂಗ್ ಮಾಡುವ ರೀತಿಯಿಂದ ಗೆಲುವು ಪಡೆಯುವುದು ತುಂಬಾ ವಿಶೇಷವಾಗಿದೆ. ಇದು ಈ ಪಂದ್ಯದಲ್ಲಿ ಮಾತ್ರವಲ್ಲ, ಕಳೆದ ಎರಡ್ಮೂರು ವರ್ಷಗಳಿಂದಲೂ ಅವರು ಇದೇ ರೀತಿ ಬೌಲಿಂಗ್ ಮಾಡುತ್ತಿದ್ದಾರೆ" ಎಂದು ಪಂದ್ಯದ ನಂತರ ಕೊಹ್ಲಿ ಹೇಳಿದ್ದಾರೆ.
ಇನ್ನು ಶಮಿ ಪ್ರದರ್ಶನದ ಬಗ್ಗೆ ಮಾತನಾಡಿ, ಆತ ವಿಶ್ವದರ್ಜೆಯ ಪ್ರತಿಭೆ, ವೈಯಕ್ತಿಕವಾಗಿ ಹೇಳುವುದಾದದರೆ ಆತ ಪ್ರಸ್ತುತ ವಿಶ್ವದ ಅತ್ಯುತ್ತಮ 3 ಪೇಸರ್ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಕಠಿಣ ಮಣಿಕಟ್ಟು, ಸೀಮ್ ಪೊಜಿಸನ್ ಹಾಗೂ ಲೈನ್ ಅಂಡ್ ಲೆಂತ್ನಲ್ಲಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಶಮಿ ಅವರನ್ನ ವಿಶ್ವ ಶ್ರೇಷ್ಠರನ್ನಾಗಿಸಿದೆ. ಅವರು 200 ವಿಕೆಟ್ ಮೈಲಿಗಲ್ಲು ಸ್ಥಾಪಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಶಮಿ ಈ ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದಾರೆ.)
ಮಯಾಂಕ್ - ರಾಹುಲ್ರನ್ನು ಪ್ರಶಂಸಿಸಿದ ನಾಯಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದು ಈ ಪರಿಸ್ಥಿತಿಯಲ್ಲಿ ಸವಾಲಿನದ್ದಾಗಿದೆ. ನಮ್ಮ ಬ್ಯಾಟರ್ಗಳು ತೋರಿದ ಶಿಸ್ತು ಮೆಚ್ಚುವಂತದ್ದು, ಇದೆಲ್ಲದರ ಕ್ರೆಡಿಟ್ ಮಯಾಂಕ್ ಮತ್ತು ಕೆಎಲ್ ರಾಹುಲ್ಗೆ ಸಲ್ಲುತ್ತದೆ. ಅವರಿಬ್ಬರು ನಮಗೆ ಉತ್ತಮ ರೀತಿಯಲ್ಲಿ ಹೊಂದಿಸಿಕೊಟ್ಟರು ಎಂದು ಟೀಮ್ ಇಂಡಿಯಾ ನಾಯಕ ತಿಳಿಸಿದರು. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ದಿನ 117 ರನ್ಗಳ ಜೊತೆಯಾಟ ನೀಡಿದ್ದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 327 ರನ್ಗಳಿಸಿತ್ತು.
ಉತ್ತಮ ಆರಂಭ
ಈ ಪಂದ್ಯ ಗೆದ್ದಿರುವುದು ನಮಗೆ ಉತ್ತಮ ಆರಂಭ ಸಿಕ್ಕಂತಾಗಿದೆ. ಪಂದ್ಯದಲ್ಲಿ ಒಂದು ದಿನವನ್ನು ಕೆಳೆದುಕೊಂಡಿದ್ದೆವು. ಆದರೂ ಗೆಲುವು ಪಡೆದಿರುವುದು ನಾವು ಎಷ್ಟು ಚೆನ್ನಾಗಿ ಆಡಿದೆವು ಎಂಬುದನ್ನು ತೋರಿಸುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ಆಡುವುದು ಯಾವಾಗಲೂ ಕಷ್ಟಕರವಾದ ಸ್ಥಳವಾಗಿದೆ. ಆದರೆ, ಕಳೆದ ಪ್ರವಾಸದಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಗೆಲುವು ಸಾಧಿಸಿದಿದ್ದು ನಮಗೆ ತುಂಬಾ ಆತ್ಮವಿಶ್ವಾಸ ತಂದುಕೊಟ್ಟಿತ್ತು. ಇದೀಗ ಮುಂದಿನ ಪಂದ್ಯವನ್ನು ಅಲ್ಲಿ ಆಡುತ್ತಿರುವುದಕ್ಕೆ ನನಗೆ ಖುಷಿಯಿದೆ ಎಂದು ತಿಳಿಸಿದರು.
ಎರಡು ತಂಡಗಳು ಜನವರಿ 3ರಿಂದ 7ರವರೆಗ 2ನೇ ಟೆಸ್ಟ್ ಪಂದ್ಯ ಜೋಹಾನ್ಸ್‌ಬರ್ಗ್‌ನಲ್ಲಿ ಆಡಲಿದೆ.
ಇದನ್ನೂ ಓದಿ:ಸೆಂಚುರಿಯನ್ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 113 ರನ್ಗಳ ಜಯ, 1-0ಯಲ್ಲಿ ಸರಣಿ ಮುನ್ನಡೆ