ಕೋಲ್ಕತ್ತಾ, ಪಶ್ಚಿಮ ಬಂಗಾಳ: ಖ್ಯಾತ ಕ್ರಿಕೆಟಿಗ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಬಟಾನಗರದಲ್ಲಿರುವ ಜಮೀನನ್ನು ಸ್ಥಳೀಯ ಸಮಾಜ ವಿರೋಧಿಗಳು ಅತಿಕ್ರಮಣ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ ಸೌರವ್ ಗಂಗೂಲಿ ಅವರ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
ಸಿಕ್ಕಿದ ಮಾಹಿತಿಯ ಪ್ರಕಾರ, ಸೋಮವಾರ ಸೌರವ್ ಗಂಗೂಲಿ ಅವರ ಜಮೀನಿನಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಆ ಪ್ರದೇಶದ ಕೆಲವು ಸಮಾಜ ವಿರೋಧಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ, ಗಂಗೂಲಿ ಅವರ ನಿವೇಶನದ ಗೇಟ್ ಕೂಡ ಮುರಿದು ಬಿದ್ದಿದೆ. ಗೇಟ್ ಮುರಿದ ನಂತರ, ಸಮಾಜ ವಿರೋಧಿಗಳು ಸೌರವ್ ಗಂಗೂಲಿ ಅವರ ಅಕಾಡೆಮಿಗೆ ಪ್ರವೇಶಿಸಿದ್ದಾರೆ. ಬಳಿಕ ಒಳಗೆ ಸಾಕಷ್ಟು ಗದ್ದಲವನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಬಗ್ಗೆ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಕಚೇರಿ ವತಿಯಿಂದ ಠಾಣೆಗೆ ಮಾಹಿತಿ ನೀಡಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮಹೇಶ್ತಾಲ ಠಾಣೆ ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಸೌರವ್ ಗಂಗೂಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ.
ಏನಿದು ಪ್ರಕರಣ?: ಮಹೇಶ್ತಾಲ ಪೊಲೀಸ್ ಮೂಲಗಳ ಪ್ರಕಾರ, ಸೌರವ್ ಗಂಗೂಲಿ ಅವರ ಹೆಸರಿನಲ್ಲಿ ಬಟಾನಗರದಲ್ಲಿ ಖಾಲಿ ಜಮೀನಿದೆ. ಅಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಕಳೆದ ಭಾನುವಾರ ಪ್ಲಾಟ್‌ನ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೆಕ್ಯುರಿಟಿ ಗಾರ್ಡ್ನನ್ನು ಗೇಟ್ ತೆರೆಯುವಂತೆ ಕೂಗಿದ್ದಾರೆ.
ಬಹಳ ಹೊತ್ತು ಕಿರುಚಾಡಿದರೂ ಸೆಕ್ಯುರಿಟಿ ಗಾರ್ಡ್ ಬಾಗಿಲು ತೆರೆಯದ ಕಾರಣ ಕೋಪಗೊಂಡು ಡೋರ್, ಗ್ರಿಲ್ ಕಟ್ ಮಾಡಿ ಒಳ ಪ್ರವೇಶಿಸಿದ್ದಾರೆ. ಅಲ್ಲಿಗೆ ಪ್ರವೇಶಿಸಿದ ಅವರು ಭದ್ರತಾ ಸಿಬ್ಬಂದಿಯನ್ನು ಥಳಿಸಲು ಪ್ರಾರಂಭಿಸಿದರು. ಆಪಾದಿತ ಘಟನೆಯನ್ನು ಭದ್ರತಾ ಸಿಬ್ಬಂದಿ ದೂರಿನ ರೂಪದಲ್ಲಿ ಸೌರವ್ ಗಂಗೂಲಿ ಅವರ ಆಪ್ತ ಕಾರ್ಯದರ್ಶಿಗೆ ವರದಿ ಮಾಡಿದ್ದರು. ಆಗ ಆರೋಪಿಗಳು ಫೋನ್ ಮೂಲಕ ಗಂಗೂಲಿ ಕಾರ್ಯದರ್ಶಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವಿಷಯ ಗಂಗೂಲಿ ಗಮನಕ್ಕೆ ಬಂದಿತ್ತು. ಕೂಡಲೇ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸುವಂತೆ ಸೂಚಿಸಿದರು.
ಈ ಘಟನೆ ಸಂಬಂಧಿಸಿದಂತೆ ಗಂಗೂಲಿ ಆಪ್ತ ಕಾರ್ಯದರ್ಶಿ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದರು. ಘಟನೆಯ ಬಗ್ಗೆ ತನಿಖೆ ನಡೆಸಿದ ಮಹೇಶ್ತಾಲ ಠಾಣೆಯ ಪೊಲೀಸರು ಸುಪ್ರಿಯೋ ಗೋಸ್ವಾಮಿ ಎಂಬ ಯುವಕನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಟಾನಗರದ ವಾರ್ಡ್ ಸಂಖ್ಯೆ 27 ರಲ್ಲಿ ಸೌರವ್ ಗಂಗೂಲಿ ಅವರ ಹೆಸರಿನ ಅಕಾಡೆಮಿ ಇದೆ. ಭದ್ರತಾ ಕರ್ತವ್ಯದಲ್ಲಿ ಹಲವಾರು ಜನರು ಇದ್ದಾರೆ. ಆದರೆ ಸಂಜೆ ಹಲವಾರು ಯುವಕರು ಅಲ್ಲಿ ಅಕ್ರಮವಾಗಿ ಪ್ರವೇಶಿಸಿ ಮದ್ಯಪಾನ ಪಾರ್ಟಿಗಳನ್ನು ನಡೆಸುತ್ತಿರುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಅವಕಾಶ ನೀಡಲು ನಿರಾಕರಿಸಿದ್ದರಿಂದ ಮಧ್ಯವಯಸ್ಕ ಯುವಕರು ಹಲವು ಬಾರಿ ನಮ್ಮನ್ನು ಹಿಂಬಾಲಿಸುತ್ತಾರೆ ಎಂದು ಇಲ್ಲಿನ ನಿವಾಸಿಗಳು ಸಹ ದೂರಿದ್ದಾರೆ.
ಓದಿ: Sourav Ganguly: ಸೋಲಿನ ಕಹಿ ಮರೆತು ರೋಹಿತ್ ಶರ್ಮಾ ವಿಶ್ವಕಪ್ ತಂಡ ಮುನ್ನಡೆಸಲಿ- ಗಂಗೂಲಿ