ಮುಂಬೈ: ಭಾರತ ತಂಡದ ಶ್ರೇಷ್ಠ ಆರಂಭಿಕರಾಗಿದ್ದ ಸೌರವ್ ಗಂಗೂಲಿ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಜೊತೆಗೂಡಿ 2ನೇ ವಿಕೆಟ್ಗೆ ವಿಶ್ವದಾಖಲೆಯ 318 ರನ್ಗಳ ಜೊತೆಯಾಟ ನಡೆಸಿ ಇಂದಿಗೆ ಬರೋಬ್ಬರಿ 22 ವರ್ಷಗಳು ತುಂಬಿವೆ.
1999ರ ವಿಶ್ವಕಪ್ನಲ್ಲಿ ಮೇ 26ರಂದು ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆರಂಭಿಕ ಗಂಗೂಲಿ(183) ಹಾಗೂ 3ನೇ ಕ್ರಮಾಂಕದ ರಾಹುಲ್ ದ್ರಾವಿಡ್(145) ಭರ್ಜರಿ ಶತಕ ಬಾರಿಸಿ ಮೆರೆದಾಡಿದ್ದರು.
ಈ ಜೋಡಿ ಏಕದಿನ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 300ಕ್ಕೂ ಹೆಚ್ಚು ರನ್ಗಳ ಜೊತೆಯಾಟ ನಡೆಸಿತ್ತು. ಅಲ್ಲಿಯವರೆಗೆ ಭಾರತದವರೇ ಆದ ಅಜರುದ್ಧೀನ್ ಮತ್ತು ಅಜಯ್ ಜಡೇಜಾ 4ನೇ ವಿಕೆಟ್ಗೆ 275 ರನ್ಗಳ ಜೊತೆಯಾಟ ನಡೆಸಿದ್ದೇ ಗರಿಷ್ಠ ರನ್ಗಳ ಜೊತೆಯಾಟವಾಗಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ಸದಗೊಪ್ಪನ್ ರಮೇಶ್(5) ವಿಕೆಟ್‌ನ ಬೇಗನೆ ಕಳೆದುಕೊಂಡಿತ್ತು. ಆದರೆ, ನಂತರ ಒಂದಾದ ಬಹದ್ದೂರ್ ಜೋಡಿ ಲಂಕಾದ ಪ್ರಚಂಡ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದರು. ಈ ಜೋಡಿ 44.3 ಓವರ್ಗಳನ್ನಾಡಿ 318 ರನ್ ಕಲೆ ಹಾಕಿದ್ದರು.
ಗಂಗೂಲಿ 158 ಎಸೆತಗಳಲ್ಲಿ 17 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ 183 ರನ್ಗಳಿಸಿದರೆ, ದ್ರಾವಿಡ್ 129 ಎಸೆತಗಳಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 145 ರನ್ ಸಿಡಿಸಿದ್ದರು.
ಇವರಿಬ್ಬರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 373 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ರಾಬಿನ್ ಸಿಂಗ್(31ಕ್ಕೆ5) ಬೌಲಿಂಗ್ ದಾಳಿಗೆ ಸಿಲುಕಿ 216 ರನ್ಗಳಿಗೆ ಸರ್ವಪತನ ಕಂಡಿತ್ತು. ಈ ಪಂದ್ಯವನ್ನು ಅಜರುದ್ದೀನ್ ಬಳಗ 157 ರನ್ಗಳಿಂದ ಗೆಲುವು ಸಾಧಿಸಿತ್ತು.
ವಿಶೇಷವೆಂದರೆ ಭಾರತೀಯರಿಂದ ಸೃಷ್ಟಿಯಾಗಿದ್ದ ಈ ದಾಖಲೆಯನ್ನು 6 ತಿಂಗಳ ಅಂತರದಲ್ಲಿ ಸಚಿನ್ ಮತ್ತು ದ್ರಾವಿಡ್ ಮುರಿದಿದ್ದರು. ಈ ಜೋಡಿ ಕಿವೀಸ್ ವಿರುದ್ಧ 2ನೇ ವಿಕೆಟ್ಗೆ 331ರನ್ ಜೊತೆಯಾಡ ನಡೆಸಿ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿತ್ತು. ಈ ದಾಖಲೆಯನ್ನು 16 ವರ್ಷಗಳ ನಂತರ 2015ರ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್( 215) ಮತ್ತು ಮಾರ್ಲೋನ್ ಸ್ಯಾಮ್ಯುಯೆಲ್ಸ್(133) 372 ರನ್ ಸೇರಿಸುವ ಮೂಲಕ ಮುರಿದಿದ್ದರು.
ದ್ರಾವಿಡ್-ಗಾಂಗೂಲಿ ಜೋಡಿಯ 22 ವರ್ಷದ ಆ ಇನಿಂಗ್ಸ್ ಅತಿ ಹೆಚ್ಚು ರನ್ಗಳ ಜೊತೆಯಾಟ ನಡೆಸಿರುವ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ, ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ ಹಾಗೂ ಸ್ಯಾಮ್ಯುಯೆಲ್ ಜೋಡಿ, ನಂತರದ ಸ್ಥಾನದಲ್ಲಿ ವಿಂಡೀಸ್ನ ಕ್ಯಾಂಪ್ಬೆಲ್-ಸೈ ಹೋಪ್ ಜೋಡಿ ಇದ್ದು, ಈ ಜೋಡಿ ಮೊದಲ ವಿಕೆಟ್ಗೆ 331 ರನ್ಗಳಿಸಿದೆ. 3 ನೇ ಸ್ಥಾನದಲ್ಲಿ ಸಚಿನ್-ದ್ರಾವಿಡ್(331) ಜೋಡಿ ಇದೆ.
ಇದನ್ನು ಓದಿ:ಐಸಿಸಿ ರ‍್ಯಾಂಕಿಂಗ್ : 2ನೇ ಸ್ಥಾನಕ್ಕೇರಿದ ಮೆಹಿದಿ ಹಸನ್, 4ಕ್ಕೆ ಕುಸಿದ ಬುಮ್ರಾ