ನವದೆಹಲಿ: ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಏಕದಿನ, ಟಿ - 20 ನಾಯಕ ರೋಹಿತ್ ಶರ್ಮಾ ನಡುವಿನ ಭಿನ್ನಾಭಿಪ್ರಾಯ ಬಗ್ಗೆ ಮಾಜಿ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಟೀಂ ಇಂಡಿಯಾದಲ್ಲಿನ ಯಾವುದೇ ಊಹಾಪೋಹಗಳಿಗೆ ಆಸ್ಪದ ನೀಡಬೇಡಿ ಎಂದು ಸಲಹೆ ನೀಡಿದ್ದಾರೆ.
ಯಾವ ಆಟದಲ್ಲಿ ಯಾವ ಆಟಗಾರರ ನಡುವೆ ಏನು ನಡೆಯುತ್ತಿದೆ ಎಂದು ನಾನು ಹೇಳಲು ಸಾಧ್ಯವಿಲ್ಲ. ಅದು ಸಂಬಂಧಪಟ್ಟ ಒಕ್ಕೂಟ / ಸಂಘಗಳ ಕೆಲಸ. ಆದರೆ, ಕ್ರೀಡೆ ಶ್ರೇಷ್ಠವಾದದ್ದು, ಕ್ರೀಡೆಗಿಂತ ಯಾರೂ ದೊಡ್ಡವರಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ರೋಹಿತ್ ಮತ್ತು ಕೊಹ್ಲಿ ಒಟ್ಟಿಗೆ ಆಡದಿದ್ದರೆ, ಮೆನ್ ಇನ್ ಬ್ಲೂ ಬಳಲುತ್ತದೆ. ಕ್ರಿಕೆಟ್‌ಗೆ ಹೊಡೆತ ಬೀಳುತ್ತದೆ ಎಂದು ಮಾಜಿ ಕ್ರಿಕೆಟಿಗರಾದ ಕೀರ್ತಿ ಆಜಾದ್, ಮೊಹಮ್ಮದ್ ಅಜರುದ್ದೀನ್ ಟ್ವೀಟ್ ಮಾಡಿದ್ದರು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಗಾಯಗೂಂಡಿದ್ದ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಇನ್ನು, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜನವರಿಯಲ್ಲಿ ತಮಗೆ ವಿಶ್ರಾಂತಿ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ವಿರಾಟ್, ತಾನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡುವುದಾಗಿ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಅವರನ್ನು ಏಕದಿನ ಹಾಗೂ ಟಿ-20 ತಂಡಗಳಿಗೆ ನಾಯಕರನ್ನಾಗಿ ಬಿಸಿಸಿಐ ಇತ್ತೀಚೆಗೆ ನೇಮಕ ಮಾಡಿತ್ತು. ಇದಾಗ ಬಳಿಕ ಟೆಸ್ಟ್ ತಂಡದ ನಾಯಕ ವಿರಾಟ್ ಹಾಗೂ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಒಬ್ಬರ ನಾಯಕತ್ವದಲ್ಲಿ ಇನ್ನೊಬ್ಬರು ಆಡಲು ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ಎರಡೂವರೆ ವರ್ಷಗಳಿಂದ ಹೇಳ್ತಾನೆ ಇದ್ದೇನೆ, ರೋಹಿತ್ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಕೊಹ್ಲಿ
ಇದನ್ನೂ ಓದಿ: ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡಲಿದ್ದೇನೆ : ಗೊಂದಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ