ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ತಂಡದ ಸಹ ಆಟಗಾರರು ಬಿಸಿಸಿಐಗೆ ದೂರು ನೀಡಿದ್ದಾರೆ ಎಂಬ ವರದಿಗಳನ್ನು 'ಕೆಲಸಕ್ಕೆ ಬಾರದವು, ಇದರಲ್ಲಿ ನಿಜವಿಲ್ಲ' ಎಂದು ಭಾರತೀಯ ಕ್ರಿಕೆಟ್ ಮಂಡಳಿ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಕೆಲವು ಮಾಧ್ಯಮಗಳು ಇಂಗ್ಲೆಂಡ್ ಪ್ರವಾಸದ ವೇಳೆ ವಿರಾಟ್ ಕೊಹ್ಲಿಯ ವಿರುದ್ಧ ಭಾರತ ತಂಡದ ಕೆಲವು ಹಿರಿಯ ಆಟಗಾರರು ದೂರು ನೀಡಿದ್ದಾರೆ ಎಂದು ವರದಿ ಮಾಡಿದ್ದವು. ಇದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ಒಂದು ಮಾಧ್ಯಮ ಸ್ಪಿನ್ನರ್ ಆರ್.ಅಶ್ವಿನ್ ದೂರು ನೀಡಿರುವುದರಲ್ಲಿ ಒಬ್ಬರು ಎಂದು ಪ್ರಕಟಿಸಿತ್ತು.
ಈ ವಿಚಾರವಾಗಿ ಬುಧವಾರ ಪ್ರತಿಕ್ರಿಯಿಸಿದ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಕೊಹ್ಲಿ ವಿರುದ್ಧ ದೂರು ನೀಡಿರುವಂತಹ ಯಾವುದೇ ಘಟನೆಗಳು ನಡೆದಿಲ್ಲ. ಮಾಧ್ಯಮಗಳು ಹೀಗೆ ತೋಚಿದ್ದನ್ನು ಬರೆದು ವಿವಾದ ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದು ಕಿಡಿ ಕಾರಿದರು.
"ಮಾಧ್ಯಮಗಳು ಹೀಗೆ ಕೆಟ್ಟದಾಗಿ ಬರೆಯುವುದನ್ನು ನಿಲ್ಲಿಸಬೇಕು. ಯಾವುದೇ ಭಾರತೀಯ ಕ್ರಿಕೆಟಿಗ ಮೌಖಿಕ ಅಥವಾ ಅಥವಾ ಲಿಖಿತವಾಗಿ ಕೊಹ್ಲಿ ವಿರುದ್ಧ ಬಿಸಿಸಿಐಗೆ ದೂರು ನೀಡಿಲ್ಲ. ಇಂತಹ ಎಲ್ಲಾ ಸುಳ್ಳು ವರದಿಗಳಿಗೆ ಉತ್ತರಿಸುತ್ತಾ ಕೂರಲು ಬಿಸಿಸಿಐಗೆ ಸಾಧ್ಯವಿಲ್ಲ" ಎಂದು ಧುಮಲ್ ಹೇಳಿದ್ದಾರೆ.
ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದಿರುವ ವಿಚಾರದಲ್ಲಿ ಬಿಸಿಸಿಐ ಪಾತ್ರವಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ, ಟಿ20 ತಂಡದ ನಾಯಕತ್ವವನ್ನು ತ್ಯಜಿಸುವುದು ಕೊಹ್ಲಿ ನಿರ್ಧಾರವೇ ಹೊರತು ಬಿಸಿಸಿಐನದ್ದಲ್ಲ. ಇದರಲ್ಲಿ ಬಿಸಿಸಿಐ ಪಾತ್ರವಿಲ್ಲ, ಚರ್ಚೆ ಕೂಡ ನಡೆಸಿಲ್ಲ. ಅದು ವಿರಾಟ್ ಕೊಹ್ಲಿ ಅಂತಿಮವಾಗಿ ತೆಗೆದುಕೊಂಡಿರುವ ನಿರ್ಧಾರ. ಅದನ್ನು ಅವರು ಬಿಸಿಸಿಐಗೂ ತಿಳಿಸಿದ್ದಾರೆ. ಹಾಗಾಗಿ ವರದಿಗಳನ್ನು ಊಹೆಯ ಮೇರೆಗೆ ಅಥವಾ ಯಾವುದೋ ಮೂಲ ತಿಳಿಸಿದೆ ಎಂದು ಖಚಿತ ಮಾಹಿತಿಯಿಲ್ಲದೆ ಪ್ರಕಟಿಸಬಾರದು. ಇದರಿಂದ ಈಗಾಗಲೇ ಭಾರತೀಯ ಕ್ರಿಕೆಟ್ಗೆ ಸಾಕಷ್ಟು ಹಾನಿ ಆಗಿದೆ ಎಂದು ಧುಮಾಲ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Ipl ಪಂದ್ಯದ ವೇಳೆ ಕ್ರೀಡಾ ಸ್ಫೂರ್ತಿ ವಿವಾದ: ನಾನು ತಪ್ಪು ಮಾಡಿಲ್ಲ ಅಶ್ವಿನ್ ಸ್ಪಷ್ಟನೆ