ಅಬುಧಾಬಿ: ವಿಶ್ವಕಪ್ ಕ್ರಿಕೆಟ್ನಲ್ಲಿ ಅತ್ಯಂತ ಕಡೆಗಣಿಸಲ್ಪಟ್ಟಿರುವ ತಂಡ ಎಂದರೆ ನ್ಯೂಜಿಲ್ಯಾಂಡ್. ಯಾವುದೇ ವಿಶ್ವ ಮಟ್ಟದ ಟೂರ್ನಿಯಾಗಲಿ ಕ್ರಿಕೆಟ್ ವಿಶ್ಲೇಷಕರು, ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ ತಂಡಗಳ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಭಾವಿಸುತ್ತಾರೆ. ಆದರೆ ಯಾರೊಬ್ಬರು ನ್ಯೂಜಿಲ್ಯಾಂಡ್ ತಂಡವನ್ನು ಪರಿಗಣನೆಗೆ ತೆಗೆದುಕೊಳ್ಳವುದಿಲ್ಲ.
ಆದರೆ ಕೇವಲ 50 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪುಟ್ಟ ರಾಷ್ಟ್ರ ಕಳೆದ 6 ಐಸಿಸಿ ಟೂರ್ನಿಗಳಲ್ಲಿ 4ನೇ ಬಾರಿಗೆ ಫೈನಲ್ ಪ್ರವೇಶಿಸಿ ಎಲ್ಲರ ಅಭಿಪ್ರಾಯಗಳನ್ನ ತಮ್ಮ ಪ್ರದರ್ಶನದ ಮೂಲಕ ತೋರಿಸುತ್ತಲೇ ಇದೆ. ಕಳೆದ ಒಂದು ದಶಕದಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. 2015ರ ಏಕದಿನ ವಿಶ್ವಕಪ್ನಲ್ಲಿ ಫೈನಲ್ ತಲುಪಿದ್ದ ಕಿವೀಸ್, 2016 ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಮುಗ್ಗರಿಸಿತ್ತು.
2017ರ ಚಾಂಪಿಯನ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ತೋರಿ ಬಾಂಗ್ಲಾದೇಶದ ವಿರುದ್ಧ ಸೋಲು ಕಂಡು ಹೊರಬಿದ್ದಿದ್ದ ನ್ಯೂಜಿಲ್ಯಾಂಡ್ 2019ರಲ್ಲಿ ಸಾಕಷ್ಟು ಸುಧಾರಣೆಗೊಂಡು ಅಗ್ರಸ್ಥಾನದಲ್ಲಿದ್ದ ಭಾರತ ತಂಡವನ್ನ ಸೆಮಿಫೈನಲ್ನಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೈ ಸಾಧಿಸಿದರೂ ಬೌಂಡರಿ ಲೆಕ್ಕಚಾರಾದ ಕೆಟ್ಟ ನಿಯಮದಿಂದ ಟ್ರೋಫಿಯನ್ನ ಕಳೆದುಕೊಂಡಿತು.
ಆದರೆ ಐಸಿಸಿಯ ಇದೇ ಮೊದಲ ಬಾರಿಗೆ ಪರಿಚಯಿಸಿದ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮತ್ತೆ ಬಲಿಷ್ಠ ಭಾರತ ತಂಡವನ್ನು ಮಣಿಸಿ ಮೊದಲ ಐಸಿಸಿ ಟ್ರೋಫಿ ಎತ್ತಿ ಹಿಡಿದಿತ್ತು. 5 ದಶಕಗಳ ಕಾಲ ದಿಗ್ಗಜ ಕ್ರಿಕೆಟಿಗರು ಬಂದೂ ಹೋದರೂ ಸಾಧ್ಯವಾಗದಿದ್ದ ಟ್ರೋಪಿಯನ್ನ ಕೇನ್ ವಿಲಿಯಮ್ಸನ್ ಗೆಲ್ಲುವ ಮೂಲಕ ಪುಟ್ಟ ರಾಷ್ಟ್ರದ ಕನಸನ್ನ ನನಸು ಮಾಡಿದರು.
ಇದೀಗ ಊಹೆಗೆ ನಿಲುಕದ ಪ್ರದರ್ಶನ ತೋರಿ ಚುಟುಕು ಕ್ರಿಕೆಟ್ನಲ್ಲೂ ತಮ್ಮ ತಾಕತ್ತನ್ನು ತೋರಿಸಲು ಹೊರಟಿದೆ. ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಿಗೆ ಟಿ20 ವಿಶ್ವಕಪ್ನಲ್ಲಿ ಸೇಡು ತೀರಿಸಿಕೊಂಡಿರುವ ನ್ಯೂಜಿಲ್ಯಾಂಡ್ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಅಥವಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಇದನ್ನು ಓದಿ:T20I world cup: ಇಂಗ್ಲೆಂಡ್ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ ಕಿವೀಸ್