ಬೆಂಗಳೂರು: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಹೆಚ್‌ಕೆಇಎಸ್) ಅಧೀನದಲ್ಲಿರುವ ಕಲಬುರಗಿಯ ಮಹಾದೇವಪ್ಪ ರಾಂಪೊರೆ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡ ಆರೋಪದಲ್ಲಿ ಬಂಧನ ಭೀತಿಯಲ್ಲಿದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಶಶೀಲ್ ನಮೋಶಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಂಚನೆ ಆರೋಪದಲ್ಲಿ ಕಲಬುರಗಿಯ ಸಿಇಎನ್ ಪೊಲೀಸರು ದಾಖಲಿಸಿದ್ದ ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿದ್ದ ಶಶೀಲ್ ನಮೋಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಅಲ್ಲದೆ, ಅರ್ಜಿದಾರರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ 10 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವಂತಹ ಆರೋಪಗಳಿಲ್ಲ. ಅವ್ಯವಹಾರ ನಡೆದಿರುವ ಮೊತ್ತ ಹೆಚ್ಚಾಗಿದ್ದರೂ, ಆರೋಪಿಗೆ ಕೇವಲ 7 ವರ್ಷಗಳು ಮಾತ್ರ ಶಿಕ್ಷೆ ನೀಡುವಂತಹದ್ದಾಗಿದೆ ಎಂದಿದೆ.
ಜೊತೆಗೆ, 2009ರಿಂದ 2024ರ ಅವಧಿಯಲ್ಲಿ ಹಣ ದುರುಪಯೋಗಪಡಿಸಿಕೊಂಡಿರುವ ಸಂಬಂಧ ಸದಸ್ಯರಲ್ಲಿ ಆರೋಪ, ಪತ್ಯಾರೋಪಗಳು ಬರುತ್ತಿವೆ. ಅಲ್ಲದೆ, ಅರ್ಜಿದಾರರು ಹೆಚ್‌ಕೆಇಎಸ್‌ನ ಸದಸ್ಯರಾಗಿದ್ದೂ ಜನ ಪ್ರತಿನಿಧಿಯಾಗಿದ್ದು, ತನಿಖೆಗೆ ಸಹಕರಿಸಲಿದ್ದಾರೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ತಿನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಠಿಣ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಷರತ್ತುಗಳು: ಅರ್ಜಿದಾರರು 2 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತದ ಶ್ಯೂರಿಟಿ ನೀಡಬೇಕು. ತನಿಖಾಧಿಕಾರಿ ಕರೆದಾಗ ತನಿಖೆಗೆ ಹಾಜರಾಗಿ ಅಗತ್ಯವಿದ್ದಲ್ಲಿ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು. ಅನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಡೆ ಹೋಗಬಾರದು. ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ನಿರೀಕ್ಷಣಾ ಜಾಮೀನು ರದ್ದಾಗಲಿದೆ ಎಂದು ಪೀಠ ಷರತ್ತುಗಳನ್ನು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮತ್ತಿತರರು, ಹೆಚ್‌ಕೆಇಎಸ್ ಅಧೀನದ ಮಹಾದೇವಪ್ಪ ರಾಂಪೊರೆ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ (ಸ್ಟೈಫಂಡ್) ಮೊತ್ತ ಪಾವತಿಸದೆ ವಂಚಿಸಿದ್ದಾರೆ. ಅಲ್ಲದೆ, ಸೀಟು ಬ್ಲಾಕ್ ಮಾಡಿ, ಬಿಟ್ಟು ಹೋದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಹಣ ಹಿಂದಿರುಗಿಸಿದ್ದು, ಇನ್ನೂ ಕೆಲವರಿಗೆ ಹಣ ಹಿಂದಿರುಗಿಸದೆ, ಅವರ ಸೀಟುಗಳನ್ನು ಮಾರಾಟ ಮಾಡಿ ಅಕ್ರಮವೆಸಗಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಚೆಕ್‌ಗಳ ಮೇಲೆ ಮುಂಗಡವಾಗಿ ಸಹಿ ಪಡೆದು ಹಣವನ್ನು ಬ್ಯಾಂಕ್ನಿಂದ ತೆಗೆದುಕೊಂಡು (ಡ್ರಾ) ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ. ಸಂಸ್ಥೆಗೆ ಸೇರಿದ ಸುಮಾರು 65 ಕೋಟಿ ರೂ.ಗಳನ್ನು ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಆರೋಪಿಸಿ ಶಶೀಲ್ ನಮೋಶಿ ಮತ್ತಿತರರ ವಿರುದ್ಧ ಸಂಸ್ಥೆಯ ಸದಸ್ಯರಾದ ಪ್ರದೀಪ್ ದಾಬಶೆಟ್ಟಿ ಅವರು ಕಲಬುರಗಿಯ ಸಿಇಎನ್ ಠಾಣೆಗೆ ದೂರು ದಾಖಲಿಸಿದ್ದರು.
ದೂರಿಗೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿದ್ದ ಅರ್ಜಿದಾರ ನಮೋಶಿ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯು ವಜಾಗೊಂಡಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ಗ್ರೀನ್ ಸಿಗ್ನಲ್