ಮುಂಬೈ (ಮಹಾರಾಷ್ಟ್ರ): ಭಾರತ ಮತ್ತು ನ್ಯೂಜಿಲೆಂಡ್ 2023ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡುತ್ತಿದೆ. 2019ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮೀಸ್ ಹಂತದಲ್ಲಿ ಭಾರತ ತಂಡ ಸೋಲನುಭವಿಸಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಪ್ರತಿಯೊಬ್ಬ ಭಾರತೀಯನೂ ಬಯಸುತ್ತಾನೆ. ಈ ಹಿನ್ನೆಲೆಯಲ್ಲಿ ಮೊದಲ ಸೆಮೀಸ್ ಪಂದ್ಯಕ್ಕೆ ರೋಚಕತೆ ಹೆಚ್ಚಾಗಿದ್ದು, ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿದೆ. ಮುಂಬೈ ಪೊಲೀಸರಿಗೆ ಅಪರಿಚಿತ ವ್ಯಕ್ತಿಯಿಂದ ಬಂದಿರುವ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ವಿಶ್ವಕಪ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಖಲಿಸ್ತಾನಿ ಉಗ್ರರು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿ ಪಂದ್ಯಗಳಿಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದರು. ಕ್ರಿಡಾಂಗಣದ ಒಳಗೆ ಮೊಬೈಲ್ ಹೊರತಾಗಿ ಯಾವುದೇ ಬ್ಲೂಟೂತ್ ಡಿವೈಸ್ಗಳಿಗೆ ಅವಕಾಶ ಇಲ್ಲ ಎಂದು ಸಹ ತಿಳಿಸಲಾಗಿದೆ.
ಬೆಂಕಿ ಹಾಕುವುದಾಗಿ ಬೆದರಿಕೆ: ಖಲಿಸ್ತಾನಿಗಳ ಬೆದರಿಕೆ ಅಲ್ಲದೇ ಈಗ ಭಾರತ-ನ್ಯೂಜಿಲೆಂಡ್ ಸೆಮೀಸ್ ಪಂದ್ಯದ ವೇಳೆ ವಾಂಖೆಡೆ ಸ್ಟೇಡಿಯಂಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಬಂದಿದೆ. ಮುಂಬೈ ಪೊಲೀಸರಿಗೆ ಅಪರಿಚಿತ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ, ಸೆಮಿಫೈನಲ್ ಪಂದ್ಯವಾದ್ದರಿಂದ ಈ ಪಂದ್ಯವನ್ನು ವೀಕ್ಷಿಸಲು ವಿಶ್ವದೆಲ್ಲೆಡೆಯಿಂದ ಪ್ರೇಕ್ಷಕರು ಮುಂಬೈಗೆ ಆಗಮಿಸಿದ್ದಾರೆ. ಆದರೆ, ಮುಂಬೈ ಪೊಲೀಸರಿಗೆ ಬೆದರಿಕೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಲರ್ಟ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆ ಮತ್ತು ಪಡೆಗಳನ್ನು ನಿಯೋಜಿಸಲಾಗಿದೆ.
ಹೆಚ್ಚಿನ ಭದ್ರತೆ: ಈ ಬೆದರಿಕೆಯಿಂದಾಗಿ ವಾಂಖೆಡೆ ಸ್ಟೇಡಿಯಂ ಮುಂದೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ದಕ್ಷಿಣ ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯ ಜನಸಂದಣಿ ಇರುವ ಕಾರಣ ಇಡೀ ದಕ್ಷಿಣ ಮುಂಬೈಗೆ ಭದ್ರತೆಯನ್ನು ಸಹ ನಿಯೋಜಿಸಲಾಗಿದೆ. ಇಲ್ಲಿಗೆ ಬರುವ ಎಲ್ಲರನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಒಳಬಿಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸತ್ಯನಾರಾಯಣ್ ಮಾಹಿತಿ ನೀಡಿದ್ದಾರೆ.
2023ರ ವಿಶ್ವಕಪ್‌ನಲ್ಲಿ ಭಾರತ ತಂಡ ಲೀಗ್ ಹಂತದ 9 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮೀಸ್ ಪ್ರವೇಶಿಸಿದೆ. ರೋಹಿತ್ ಪಡೆಗೆ 2019 ವಿಶ್ವಕಪ್‌ನ ಎದುರಾಳಿ ತಂಡವಾದ ನ್ಯೂಜಿಲೆಂಡ್ ಜೊತೆಗೇ ಪಂದ್ಯ ಇದೆ. ಲೀಗ್ ಹಂತದಲ್ಲಿ ಭಾರತ ಕಿವೀಸ್ ವಿರುದ್ಧ ಧರ್ಮಶಾಲಾ ಮೈದಾನದಲ್ಲಿ ಗೆಲುವು ದಾಖಲಿಸಿತ್ತು. 10 ವರ್ಷಗಳ ವಿಶ್ವಕಪ್ ಬರವನ್ನು ನೀಗಿಸಲು ಟೀಮ್ ಇಂಡಿಯಾ ಈ ಪ್ರಮುಖ ಪಂದ್ಯವನ್ನು ಗೆಲ್ಲಬೇಕಿದೆ.
ಇದನ್ನೂ ಓದಿ: ಸಿಕ್ಸ್ ವೀರ ರೋಹಿತ್ ಶರ್ಮಾ: ಯುನಿವರ್ಸಲ್ ಬಾಸ್ ದಾಖಲೆ ಉಡೀಸ್