ನವದೆಹಲಿ: ಬಯೋ ಬಬಲ್ನಲ್ಲಿ ಕೊರೊಬಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ ಐಪಿಎಲ್ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈ ಕಾರಣ ಎಲ್ಲ ಆಟಗಾರರನ್ನು ಜೋಪಾನವಾಗಿ ತವರಿಗೆ ಮರಳಿಸುವ ಕೆಲಸ ನಡೆಯುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ತನ್ನ ಆಟಗಾರರನ್ನು ತವರಿಗೆ ಕಳುಹಿಸುವ ವಿಚಾರದಲ್ಲಿ ನಡೆಸಿದ ವರ್ಚುಯಲ್ ಸಭೆಯಲ್ಲಿ ಧೋನಿ ತಾವೂ ಕೊನೆಯವರಾಗಿ ಮನೆಗೆ ತೆರಳುತ್ತೇನೆ. ಮೊದಲು ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮನೆಗೆ ಕಳುಹಿಸಿ ಎಂದು ಸಹ ಆಟಗಾರರ ಬಗ್ಗೆ ಕಾಳಜಿ ಮೆರೆದಿದ್ದಾರೆ.
"ಮಹಿಭಾಯ್ ತಾವೂ ಹೋಟೆಲ್ನಿಂದ ಕೊನೆಯ ವ್ಯಕ್ತಿಯಾಗಿ ಹೋಗುವುದಾಗಿ ಹೇಳಿದರು. ಮೊದಲು ವಿದೇಶಿ ಆಟಗಾರರು ಹೋಗಬೇಕು, ನಂತರ ಭಾರತದ ಆಟಗಾರರು ತೆರಳಲಿ. ನಾನು ಎಲ್ಲ ಆಟಗಾರರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ತಿಳಿದ ಮೇಲೆ ನಾಳೆ (ಗುರುವಾರ) ಮನೆಗೆ ಹೋಗುತ್ತೇನೆ " ಎಂದು ಆಡಳಿತ ಮಂಡಳಿಗೆ ತಿಳಿಸಿದರೆಂದು ಸಿಎಸ್ಕೆ ಸದಸ್ಯರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಿಎಸ್ಕೆ ಭಾರತೀಯರಿಗಾಗಿ ದೆಹಲಿಯಿಂದ 10 ಸೀಟಿನ ಚಾರ್ಟೆರ್ ಪ್ಲೈಟ್ ಏರ್ಪಾಡು ಮಾಡಿತ್ತು. ಬುಧವಾರ ಬೆಳಗ್ಗೆ ರಾಜ್ಕೋಟ್ ಮತ್ತು ಮುಂಬೈಗೆ ಆಟಗಾರರನ್ನು ಬಿಡಲಾಗಿತ್ತು. ನಂತರ ಸಂಜೆ ಬೆಂಗಳೂರು ಮತ್ತು ಚೆನ್ನೈಗೆ ಆಟಗಾರರನ್ನು ತಲುಪಿಸಲಾಗಿತ್ತು. ಇದೀಗ ಹೋಟೆಲ್ನಲ್ಲಿರುವ ಧೋನಿ ಗುರುವಾರ ಸಂಜೆ ರಾಂಚಿಗೆ ತೆರಳಲಿದ್ದಾರೆ.