ಭೋಪಾಲ್(ಮಧ್ಯಪ್ರದೇಶ): ಟಿ20 ವಿಶ್ವಕಪ್ನಲ್ಲಿ ಅಕ್ಟೋಬರ್ 23ರಂದು ಭಾರತ ತಂಡದ ವಿರುದ್ಧ ಜಯಭೇರಿ ಬಾರಿಸಿದ ಪಾಕಿಸ್ತಾನ ತಂಡದ ಪರ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ ಆರೋಪದಡಿ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದು, ದೇಶದ್ರೋಹ (ಐಪಿಸಿ ಸೆಕ್ಷನ್ 124-A) ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ಸಾತ್ನಾ ಜಿಲ್ಲೆಯ ವಿಶ್ವ ಹಿಂದು ಪರಿಷತ್(VHP) ಕಾರ್ಯದರ್ಶಿ ಅನುರಾಗ್ ಮಿಶ್ರಾ ಮತ್ತು ಇತರರು ನೀಡಿದ ದೂರಿನ ಆಧಾರದ ಮೇಲೆ ಮೈಹಾರ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದ ವ್ಯಕ್ತಿಯನ್ನು ಮೊಹಮ್ಮದ್ ಫರೂಕ್ (23) ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 124-ಎ (ದೇಶದ್ರೋಹ), 153-ಬಿ(ರಾಷ್ಟ್ರೀಯ ಏಕೀಕರಣಕ್ಕೆ ಧಕ್ಕೆ), 504( ಉದ್ದೇಶಪೂರ್ವಕವಾಗಿ ಶಾಂತಿ ಭಂಗ ಪ್ರಯತ್ನ) ಮತ್ತು 505(ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೈಹಾರ್ ಉಪವಿಭಾಗದ ಪೊಲೀಸ್ ಅಧಿಕಾರಿ ಹಿಮಾಲಿ ಸೋನಿ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಫರೂಕ್ನನ್ನು ಬಂಧಿಸಿದ ನಂತರ ಸ್ಥಳೀಯ ಸೋಮವಾರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಅವರನ್ನು ಜೈಲಿಗಟ್ಟಲಾಗಿದೆ ಎಂದು ಪೊಲೀಸರು ತಿಳಿಸಿದರು.
ಎಫ್ಐಆರ್ ಪ್ರಕಾರ, ಅಕ್ಟೋಬರ್ 24ರಂದು ಭಾರತದ ವಿರುದ್ಧ ಪಾಕಿಸ್ತಾನ ತಂಡ ಗೆಲ್ಲುತ್ತಿದ್ದಂತೆ ಸಾಹಿಕಲ್ ಖಾನ್ ಎಂಬ ಹೆಸರಿನ ಮತ್ತೊಬ್ಬ ತನ್ನ ಫೇಸ್ಬುಕ್ ಖಾತೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಮತ್ತು ಬಾಬರ್ ಅಜಮ್ ಜಿಂದಾಬಾದ್ ಎಂದು ಪೋಸ್ಟ್ ಮಾಡಿದ್ದಾನೆ. ಇದಕ್ಕೆ ಫರೂಕ್, "ಪಾಕಿಸ್ತಾನ ಪಂದ್ಯವನ್ನು ಗೆದ್ದರೆ, ಭಾರತ ತಂಡ ನಮ್ಮ ಹೃದಯ ಗೆದ್ದಿದೆ" ಎಂದು ಎರಡೂ ತಂಡಗಳ ನಾಯಕರ ಫೋಟೋಗಳನ್ನು ಶೇರ್ ಮಾಡಿದ್ದ ಎಂದು ತಿಳಿದುಬಂದಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ಇದೇ ಪ್ರಕರಣದಲ್ಲಿ ರಾಜಸ್ಥಾನ, ಶ್ರೀನಗರ ಮತ್ತು ಉತ್ತರ ಪ್ರದೇಶದಲ್ಲಿ ಹಲವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕೊಹ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿರುವ ಸುದ್ದಿ ಕೇಳಿ ತುಂಬಾ ನೋವುಂಟಾಗಿದೆ: ಇಂಜಮಾಮ್-ಉಲ್-ಹಕ್