ಮೆಲ್ಬರ್ನ್(ಆಸ್ಟ್ರೇಲಿಯಾ): ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಗುಂಪು ಹಂತದ ಪಂದ್ಯ ಸಾಕಷ್ಟು ರೋಚಕತೆ ಉಂಟುಮಾಡಿತ್ತು. ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಪಂದ್ಯವನ್ನು ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಗೆಲ್ಲಿಸಿ ಕೊಟ್ಟ ಪರಿಯೇ ಅದ್ಭುತ.
ಪಂದ್ಯವನ್ನು ಭಾರತ 4 ವಿಕೆಟ್ಗಳಿಂದ ಗೆದ್ದ ಬಳಿಕ ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳ ಬಾಯಲ್ಲಿ ವಿರಾಟ್ ಕೊಹ್ಲಿಯದ್ದೇ ಗುಣಗಾನ. ಪಂದ್ಯದ ರೋಚಕತೆ ಹೆಚ್ಚಿಸಿದ ವಿರಾಟ್ಗೆ ಎಲ್ಲರೂ ಫುಲ್ಮಾರ್ಕ್ ಕೊಟ್ಟಿದ್ದಾರೆ. ಈ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಷ್, "ಇನ್ನು ಸಾಕು, ವಿಶ್ವಕಪ್ ಅನ್ನೇ ನಿಲ್ಲಿಸಿಬಿಡಿ" ಎಂದಿದ್ದಾರೆ.
ಆಸ್ಟ್ರೇಲಿಯಾ- ಶ್ರೀಲಂಕಾ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹದ್ದೊಂದು ರೋಚಕ ಪಂದ್ಯವನ್ನು ನೋಡಿದ ಬಳಿಕ ವಿಶ್ವಕಪ್ ಆಡಿಸುವುದೇ ಬೇಡ ಅನ್ನಿಸಿದೆ. ಭಾರತ-ಪಾಕ್ ನಡುವಿನ ಪಂದ್ಯಕ್ಕಿಂತ ಉತ್ತಮವಾದ ಆಟವನ್ನು ವೀಕ್ಷಿಸಲು ಸಾಧ್ಯವೇ?. ಟಿ20 ವಿಶ್ವಕಪ್‌ಗೆ ಇನ್ನೂ ಮೂರು ವಾರ ಬಾಕಿ ಇದೆ. ಅದಕ್ಕೂ ಮುನ್ನವೇ ಅಭಿಮಾನಿಗಳು ಇದೊಂದು ಪಂದ್ಯದಿಂದ ಎಲ್ಲ ಖುಷಿ ಅನುಭವಿಸಿದ್ದಾರೆ. ಹೀಗಾಗಿ ವಿಶ್ವಕಪ್ ಇಲ್ಲಿಗೆ ನಿಲ್ಲಿಸಿದರೂ ಒಕೆ ಎಂದು ತಮಾಷೆ ಮಾಡಿದ್ದಾರೆ.
ಭಾರತ-ಪಾಕ್ ಪಂದ್ಯವನ್ನು ಕ್ರೀಡಾಂಗಣದಲ್ಲಿ 90 ಸಾವಿರಕ್ಕೂ ಅಧಿಕ ಕ್ರಿಕೆಟ್ ಅಭಿಮಾನಿಗಳು ನೋಡಿದ್ದಾರೆ. ಅವರಲ್ಲಿ ನಾನು ಒಬ್ಬನಾಗಿದ್ದರೆ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳುತ್ತಿದ್ದೇನೆ. ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಅಮೋಘ ಆಟವಾಡಿದ ವಿರಾಟ್ ಕೊಹ್ಲಿಗೆ ಎಲ್ಲ ಶ್ರೇಯ ಸಲ್ಲಬೇಕು. ಆತನ ಕ್ರಿಕೆಟ್ ಜೀವನವೇ ಅದ್ಭುತವಾಗಿದೆ. ಹಲವು ಏರಿಳಿತಗಳನ್ನು ಎದುರಿಸಿದ ಬಳಿಕ ಟಿ20 ವಿಶ್ವಕಪ್‌ನಲ್ಲಿ ತಮ್ಮ ಖದರ್ ತೋರಿಸಿದ್ದಾರೆ. ಅಸಾಧ್ಯವಾದುದನ್ನು ಮಾಡಿ ತೋರಿಸಿದ್ದಾರೆ. ಇಂತಹ ಪವಾಡಗಳು ಇನ್ನಷ್ಟು ನಡೆಯಲಿ ಎಂದು ಮಾರ್ಷ್ ಆಶಿಸಿದರು.
ಚುಟುಕು ಮಾದರಿಯ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು.
ಇದನ್ನೂ ಓದಿ: ಗೆಲುವಿನ ರೂವಾರಿ ವಿರಾಟ್ ಎತ್ತಿ ಮುದ್ದಾಡಿದ ಇರ್ಫಾನ್: ಸುನಿಲ್ ಗವಾಸ್ಕರ್, ಶ್ರೀಕಾಂತ್ ಡ್ಯಾನ್ಸ್ ಮಾಡಿ ಸಂಭ್ರಮ