ನವದೆಹಲಿ: ಗ್ಲೋಬಲ್ ಪೇಮೆಂಟ್ಸ್ ಕಂಪನಿ ಮಾಸ್ಟರ್‌ಕಾರ್ಡ್ ಪೇಟಿಎಂ ಬದಲಿಗೆ ಭಾರತದಲ್ಲಿ ನಡೆಯುವ ಎಲ್ಲ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವವವನ್ನು ಪಡೆದುಕೊಂಡಿದೆ. ಇರಾನಿ ಟ್ರೋಫಿ, ದುಲೀಪ್ ಟ್ರೋಪಿ ಮತ್ತು ರಣಜಿ ಟ್ರೋಫಿ ಪಂದ್ಯಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲಿದೆ.
ಅಂಡರ್ 19-23 ಕ್ರಿಕೆಟ್ ಪಂದ್ಯಗಳನ್ನು ಹೊರತು ಪಡಿಸಿ ಈ ಪ್ರಾಯೋಜಕತ್ವವನ್ನು ಮಾಸ್ಟರ್ ಕಾರ್ಡ್ ಹೊಂದಲಿದೆ. ಇದರಲ್ಲಿ ಮಹಿಳಾ ಮತ್ತು ಪುರಷರ ಎಲ್ಲ ದೇಶಿ ಕ್ರಿಕೆಟ್ ಪಂದ್ಯಗಳು ಇರಲಿವೆ. 2022-23ರ ಋತುವಿನ ದೇಶೀಯ ಕ್ರಿಕೆಟ್ ಪಂದ್ಯಗಳಿಗೆ ಮಾಸ್ಟರ್‌ಕಾರ್ಡ್ ಅನ್ನು BCCI ಸ್ವಾಗತಿಸುತ್ತದೆ. ಅಂತರಾಷ್ಟ್ರೀಯ ಸ್ಥಳೀಯ ಸರಣಿಗಳ ಜೊತೆಗೆ, BCCI ನ ದೇಶೀಯ ಪಂದ್ಯಾವಳಿಗಳು ನಿರ್ಣಾಯಕವಾಗಿವೆ.
ಭಾರತೀಯ ಕ್ರಿಕೆಟ್ ಬೆಳವಣಿಗೆಗೆ ಮಾಸ್ಟರ್‌ಕಾರ್ಡ್‌ನ ಬೆಂಬಲವನ್ನು BCCI ನಿಜವಾಗಿಯೂ ಗೌರವಿಸುತ್ತದೆ. ಈ ಕ್ರೀಡೆಯು ಉತ್ಸಾಹಕ್ಕಿಂತ ಹೆಚ್ಚಾಗಿ ದೇಶದ ಜನರ ಜೀವನ ವಿಧಾನವಾಗಿದೆ. ಈ ಪಾಲುದಾರಿಕೆಯು ಅಭಿಮಾನಿಗಳಿಗೆ ಕೆಲವು ನವೀನ ಅನುಭವಗಳನ್ನು ನೀಡುವುದನ್ನು ನಾವು ಎದುರು ನೋಡುತ್ತೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಆಗಸ್ಟ್ 2019 ರಲ್ಲಿ ನಡೆದ ಬಿಡ್ನಲ್ಲಿ Paytm 2019 - 23ರ ವರೆಗೆ ದೇಶದಲ್ಲಿ ನಡೆಯುವ ಪಂದ್ಯಗಳಿಗಾಗಿ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಗೆದ್ದುಕೊಂಡಿತ್ತು. 326.80 ಕೋಟಿ ರೂ ಬಿಡ್ನೊಂದಿಗೆ ಪೇಟಿಎಂ ಪ್ರಾಯೋಜಕತ್ವ ಪಡೆದುಕೊಂಡಿತ್ತು. Paytm ಮೊದಲ ಬಾರಿಗೆ 2015 ರಲ್ಲಿ BCCI ಯೊಂದಿಗೆ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದಕ್ಕೆ ಸಹಿ ಹಾಕಿತ್ತು. ನಾಲ್ಕು ವರ್ಷಗಳವರೆಗೆ ಅಂದರೆ 203 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು.
ಇದು ಉತ್ಕೃಷ್ಟ ಪಾಲುದಾರಿಕೆ - ಜಯ್ ಶಾ: ಬಿಸಿಸಿಐ ಜಾಗತಿಕ ಮಾರ್ಕ್ಯೂ ಬ್ರ್ಯಾಂಡ್ - ಮಾಸ್ಟರ್‌ಕಾರ್ಡ್‌ನೊಂದಿಗೆ ಪಾಲುದಾರಿಗೆ ಹೊಂದಲು ಸಂತಸ ಪಡುತ್ತೇವೆ. ಭಾರತೀಯ ಕ್ರಿಕೆಟ್‌ನಲ್ಲಿ ರೋಮಾಂಚನಕಾರಿ ಕಾಲಘಟ್ಟದಲ್ಲಿದ್ದೇವೆ. ಮುಂದಿನ ವರ್ಷದ ಆರಂಭದಲ್ಲಿ ಪ್ರತಿಷ್ಠಿತ ಬಾರ್ಡರ್ - ಗವಾಸ್ಕರ್ ಟ್ರೋಫಿ, ದೇಶೀಯ ಕ್ರಿಕೆಟ್ ದುಲೀಪ್ ಟ್ರೋಫಿ ಮತ್ತು ಪೂರ್ಣ ಪ್ರಮಾಣದ ರಣಜಿ ಟ್ರೋಫಿ ನಡೆಯಲಿವೆ. 2022-23 ರ ಋತುವಿನಲ್ಲಿ ವಯೋಮಾನದವರ ನಡುವೆ ಸಾಕಷ್ಟು ಕ್ರಿಯೆಗಳಿಗೆ ಸಾಕ್ಷಿಯಾಗಲಿದೆ ಮತ್ತು ನಾನು ಇದು ಉತ್ಕೃಷ್ಟ ಪಾಲುದಾರಿಕೆಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಧೋನಿ ಹರ್ಷ: ನಾಲ್ಕು ವರ್ಷಗಳಿಂದ ಮಾಸ್ಟರ್‌ಕಾರ್ಡ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ಭಾರತದ ಮಾಜಿ ನಾಯಕ ಮತ್ತು ವಿಕೆಟ್‌ಕೀಪರ್ ಎಂಎಸ್ ಧೋನಿ ಪ್ರತಿಕ್ರಿಯೆ ನೀಡಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನನ್ನ ಜೀವನದ ಜತೆ ಎಲ್ಲವನ್ನೂ ನೀಡಿದೆ. ಮಾಸ್ಟರ್‌ಕಾರ್ಡ್ ದೇಶದಲ್ಲಿ ನಡೆಯುವ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ಪ್ರಾಯೋಜಿಸುತ್ತಿರುವುದಕ್ಕೆ ನಾನು ರೋಮಾಂಚನಗೊಂಡಿದ್ದೇನೆ ಎಂದಿದ್ದಾರೆ.
ಮಾಸ್ಟರ್‌ಕಾರ್ಡ್‌ನ ಪ್ರಾಯೋಜಕತ್ವದ ಒಪ್ಪಂದವು ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮೂರು T20Iಗಳಿಂದ ಪ್ರಾರಂಭವಾಗುತ್ತದೆ. ಕ್ರಿಕೆಟ್ನ ಅಮೂಲ್ಯವಾದ ಕ್ಷಣಗಳನ್ನು ತಲುಪಿಸಲು ಖುಷಿಯಾಗುತ್ತಿದೆ. ಈ ವೇದಿಕೆಯು ನಮ್ಮ ಕಾರ್ಡುದಾರರು, ಗ್ರಾಹಕರು ಮತ್ತು ಪಾಲುದಾರರನ್ನು ಪ್ರಪಂಚದಾದ್ಯಂತ ಸಂಯೋಜಿಸಲು ನಮಗೆ ಅನನ್ಯ ಅವಕಾಶ ನೀಡುತ್ತದೆ ಎಂದು ಮಾಸ್ಟರ್‌ಕಾರ್ಡ್‌ನ ಮುಖ್ಯ ಮಾರುಕಟ್ಟೆ ಮತ್ತು ಸಂವಹನ ಅಧಿಕಾರಿ ರಾಜಾ ರಾಜಮನ್ನಾರ್ ಹೇಳಿದ್ದಾರೆ.
ಇದನ್ನು ಓದಿ:ಅರ್ಷದೀಪ್ ಸಿಂಗ್ ವಿಕಿಪೀಡಿಯಾದಲ್ಲಿ ಖಲಿಸ್ಥಾನ್ ಪದ.. ವಿವರಣೆ ಕೇಳಿದ ಕೇಂದ್ರ ಸರ್ಕಾರ