ಜೋಹಾನ್ಸ್ಬರ್ಗ್: ತಾವೂ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಕೆಲವು ಕಪ್ಪು ಕ್ರಿಕೆಟಿಗರ ಅಡ್ಡ ಹೆಸರುಗಳಿಂದ ಗೇಲಿ ಮಾಡಿರುವುದಕ್ಕೆ ಮತ್ತು ಸಹ ಆಟಗಾರರೊಡನೆ ಸೇರಿ ನಿಂದಿಸುವ ಗೀತೆಯನ್ನು ಹಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮತ್ತು ಪ್ರಸ್ತುತ ಮುಖ್ಯ ಕೋಚ್ ಮಾರ್ಕ್ ಬೌಷರ್ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಪಾಲ್ ಆಡಮ್ಸ್ ಸೇರಿದಂತೆ ಅವರ ಕೆಲವು ಸಹ ಆಟಗಾರರು ಕೆಲವು ವರ್ಷಗಳ ಹಿಂದೆ ಬೌಷರ್ ತಮ್ಮನ್ನು ಜನಾಂಗೀಯಾವಾಗಿ ನಿಂದಿಸಿದ್ದರು ಎಂದು ದೂರಿದ್ದರು. ಇದಕ್ಕಾಗಿ ಸೋಮವಾರ ಬೌಷರ್ ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ಸುಮಾರು 14 ಪುಟಗಳ ಅಫಿಡವಿಟ್ ಅನ್ನು ದಕ್ಷಿಣ ಆಫ್ರಿಕಾದ ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರನಿರ್ಮಾಣ ಸಮಿತಿಗೆ (ಕ್ರಿಕೆಟ್ ಸೌತ್ ಆಫ್ರಿಕಾ ಸೋಸಿಯಲ್ ಜಸ್ಟೀಸ್ ಮತ್ತು ನ್ಯಾಷನಲ್ ಬ್ಯುಲ್ಡಿಂಗ್ (SJN) )ಸಮಿತಿಗೆ ಸಲ್ಲಿಸಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವೆಬ್ಸೈಟ್ ವರದಿ ಮಾಡಿದೆ.
ಮಾರ್ಕ್ ಬೌಷರ್ ಮತ್ತು ಕೆಲವು ಸಹ ಆಟಗಾರರು ತಮ್ಮ ಮೇಲೆ ಹಾಡಿನ ಮೂಲಕ ಜನಾಂಗೀಯವಾಗಿ ನಿಂದಿಸಿದ್ದರು ಎಂದು ಆ್ಯಡಮ್ಸ್ SJN ನಲ್ಲಿ ದೂರು ದಾಖಲಿಸಿದ್ದರು. ಆದರೆ, ಬೌಷರ್ ತಾವೂ ಆ್ಯಡಮ್ಸ್ಗೆ ಯಾವುದೇ ಅಡ್ಡ ಹೆಸರನ್ನು ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ " ನನ್ನ ಮೇಲೆ ಬಂದಿರುವ ಆರೋಪಕ್ಕೆ ಯಾವುದೇ ರಾಜಿಯಿಲ್ಲದೇ ಕ್ಷಮೆಯಾಚಿಸುತ್ತೇನೆ" ಎಂದು ಬೌಷರ್ ತಮ್ಮ ಅಫಿಡವಿಟ್ನಲ್ಲಿ ಹೇಳಿದ್ದಾರೆ.
" ಯುವಕನಾಗಿದ್ದಾಗ ನನ್ನ ಸಹ ಆಟಗಾರರಲ್ಲಿ ಕೆಲವರನ್ನು ನೋಯಿಸಿರುವುದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಜೊತೆಗೆ ನನ್ನ ತಂಡದ ಸದಸ್ಯರೊಂದಿಗೆ ಕೆಲವು ಆಟಗಾರರನ್ನು ರೇಗಿಸುವ ಹಾಡುಗಳನ್ನು ಹಾಡುವಾಗ ಕೆಲವರ ಅಡ್ಡಹೆಸರುಗಳನ್ನು ಬಳಸಿರುವುದಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ" ಎಂದು ಬೌಷರ್ ತಿಳಿಸಿದ್ದಾರೆ
ಇದನ್ನು ಓದಿ:ಜನರು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ಖುಷಿಯಿದೆ, ಟೀಕೆಗೆ Don't Care: ರಹಾನೆ