ನವದೆಹಲಿ: ಯುಎಇನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನ ಟೀಂ ಇಂಡಿಯಾಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮಾರ್ಗದರ್ಶಕರಾಗಿ ನೇಮಕ ಮಾಡಲಾಗಿದೆ. ಕ್ರಿಕೆಟ್‌ನಲ್ಲಿನ ಅವರ ಅನುಭವ ತಂಡಕ್ಕೆ ನೆರವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಧೋನಿ ಅವರನ್ನು ಮೆಂಟರ್ ಆಗಿ ನೇಮಕ ಮಾಡಿ ಬಿಸಿಸಿಐ ಅಚ್ಚರಿ ಮೂಡಿಸಿತ್ತು. ವಿಶ್ವಕಪ್ ಟೂರ್ನಿ ವೇಳೆ ಎಂಎಸ್‌ಡಿ ಅನುಭವ ತಂಡಕ್ಕೆ ನೆರವಾಗಲಿದೆ. ಬಿಸಿಸಿಐ ಆಹ್ವಾನವನ್ನು ಅವರು ಒಪ್ಪಿಕೊಂಡಿದ್ದಕ್ಕೆ ಗಂಗೂಲಿ ಧನ್ಯವಾದ ಹೇಳಿರುವುದಾಗಿ ಬಿಸಿಸಿಐ ಟ್ವೀಟ್ ಮಾಡಿದೆ.
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಹಾಗೂ 2011ರ ಭಾರತದಲ್ಲಿ ಆಯೋಜಿಸಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಎಂ.ಎಸ್. ಧೋನಿ ಮುಂದಾಳತ್ವದಲ್ಲಿ ಚಾಂಪಿಯನ್ ಆಗಿತ್ತು. ಸದ್ಯ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ದೋನಿ ಮುಂದುವರೆದಿದ್ದಾರೆ. ಇದೇ 19 ರಿಂದ ಯುಎಇನಲ್ಲಿ ಈ ವರ್ಷದ ಐಪಿಎಲ್ ಟೂರ್ನಿಯ 2ನೇ ಭಾಗ ಆರಂಭವಾಗಲಿದೆ.
ಇದನ್ನೂ ಓದಿ: ಟಿ -20 ವಿಶ್ವಕಪ್ಗೆ ಸಮತೋಲಿತ ತಂಡ ಆಯ್ಕೆ ಮಾಡಲಾಗಿದೆ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ