ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹತ್ವಾಕಾಂಕ್ಷಿ, ದ್ವಿತೀಯ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಲೀಗ್ ಆಗಸ್ಟ್ 13 ರಿಂದ 29 ರ ವರೆಗೂ ನಡೆಯಲಿದೆ. ಟೂರ್ನಿಯು 33 ಪಂದ್ಯಗಳನ್ನೊಳಗೊಂಡಿದ್ದು, ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.
ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್, ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್ ಜೊತೆಗೆ ಹೊಸ ಮಾಲೀಕತ್ವದೊಂದಿಗೆ ಶಿವಮೊಗ್ಗ ಲಯನ್ಸ್ ಸೆಣಸಾಡಲಿವೆ. ಈ ಬಾರಿ ಟೂರ್ನಿಗೆ ನೂತನ ತಂಡವಾಗಿ ಮಂಗಳೂರು ಡ್ರ್ಯಾಗನ್ಸ್ ಪಾದಾರ್ಪಣೆಗೊಳ್ಳಲಿದೆ. ಜುಲೈ 22ರಂದು ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಲೀಗ್‌ನ ಕುರಿತು ಮಾತನಾಡಿದ ಮಂಗಳೂರು ಡ್ರಾಗನ್ಸ್ ಫ್ರಾಂಚೈಸಿ ಮಾಲೀಕ ಡಿ. ವಿ. ರವಿ, "ಈಗಾಗಲೇ ನಾವು ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ ತಂಡವನ್ನು ಹೊಂದಿದ್ದೇವೆ. ಮಹಾರಾಜ ಟ್ರೋಫಿಯಲ್ಲಿ ಇದು ನಮ್ಮ ಮೊದಲ ಸೀಸನ್. ಹೊಸ ತಂಡವಾಗಿ ನಾವು ಪಂದ್ಯಾವಳಿಯಲ್ಲಿ ಛಾಪು ಮೂಡಿಸಲು ಸಿದ್ಧರಾಗಿದ್ದೇವೆ. ಯಶಸ್ವಿಯಾಗಿ ಪಯಣ ಆರಂಭಿಸುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದರು.
ಶಿವಮೊಗ್ಗ ಲಯನ್ಸ್ ತಂಡದ ನೂತನ ಮಾಲೀಕ ಆರ್. ಕುಮಾರ್ ಮಾತನಾಡಿ, "ಕ್ರಿಕೆಟ್‌ನೊಂದಿಗೆ ನಾವು ದೀರ್ಘಕಾಲದ ಬದ್ಧತೆ ಕೊಂದಿದ್ದೇವೆ. ಮಹಾರಾಜ ಟ್ರೋಫಿಯ ಭಾಗವಾಗಲು ಉತ್ಸುಕರಾಗಿದ್ದೇವೆ. ಫ್ರಾಂಚೈಸಿ ಮಾದರಿಯಲ್ಲಿರುವುದರಿಂದ ಹೆಚ್ಚಿನ ಹೊಣೆಗಾರಿಕೆ ನಮ್ಮ ಮೇಲಿದೆ. ಇದು ಗೆಲುವಿನ ಹುಡುಕಾಟದಲ್ಲಿ ತಂಡವನ್ನ ರೂಪಿಸಲಿದೆ" ಎಂದರು.
ಬೆಂಗಳೂರು ಬ್ಲಾಸ್ಟರ್ಸ್ ಮಾಲೀಕ ಎ. ಮೋಹನ್ ರಾಜು ಮಾತನಾಡಿ, "ಕ್ರಿಕೆಟ್‌ನೊಂದಿಗೆ ನಾವು ಸದಾ ಸಹಭಾಗಿತ್ವ ಹೊಂದಿದ್ದು, ಪಂದ್ಯಾವಳಿಯ ಬಗ್ಗೆ ಉತ್ಸುಕರಾಗಿದ್ದೇವೆ. ತಂಡ ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದೆ. ಹರಾಜಿನ ಉಸ್ತುವಾರಿಯನ್ನು ಪರಿಣಿತರಿಗೆ ವಹಿಸಿದ್ದೇವೆ. ಕಳೆದ ಬಾರಿಯ ತರಬೇತುದಾರರನ್ನೇ ಮುಂದುವರೆಸಿದ್ದೇವೆ" ಎಂದರು.
ಗೆದ್ದ ತಂಡಕ್ಕೆ ಬಹುಮಾನವೆಷ್ಟು?: ಕೆಎಸ್‌ಸಿಎ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೊದಲ ನಾಲ್ಕು ತಂಡಗಳಿಗೆ 35 ಲಕ್ಷ ರೂಪಾಯಿ ಬಹುಮಾನವನ್ನು ನಿಗದಿಪಡಿಸಲಾಗಿದೆ. ವಿಜೇತ ತಂಡ ರೂ. 15 ಲಕ್ಷ ಮತ್ತು ರನ್ನರ್ ಅಪ್ ತಂಡ 10 ಲಕ್ಷವನ್ನು ಪಡೆಯುತ್ತದೆ. ಉಳಿದ ಮೊತ್ತವನ್ನು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳ ನಡುವೆ ಹಂಚಲಾಗುತ್ತದೆ. ಈ ವರ್ಷ ಪಂದ್ಯಾವಳಿಯು ಫ್ರಾಂಚೈಸಿ ಮಾದರಿಯನ್ನು ಹೊಂದಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಇನ್ನು ಕೆಲ ದಿನಗಳಲ್ಲಿ ನಡೆಯಲಿದೆ. ಪ್ರತಿ ಫ್ರಾಂಚೈಸಿ 50 ಲಕ್ಷದ ಮೊತ್ತವನ್ನು ಹೊಂದಿರುತ್ತದೆ.
ನಾಲ್ಕು ವಿಭಾಗಗಳನ್ನಾಗಿ ವಿಂಗಡನೆ: ಆಟಗಾರರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಎ ವರ್ಗವು ಭಾರತ ಮತ್ತು ಐಪಿಎಲ್ ಆಟಗಾರರನ್ನು ಒಳಗೊಂಡಿರುತ್ತದೆ. ಕೆಟಗರಿ ಬಿ ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ಬಿಸಿಸಿಐ ರಾಜ್ಯ ಪಂದ್ಯಾವಳಿಗಳನ್ನು ಆಡಿದ ಎಲ್ಲಾ ಹಿರಿಯ ಆಟಗಾರರನ್ನು ಒಳಗೊಂಡಿರುತ್ತದೆ. ಆದರೆ ಸಿ ವರ್ಗವು ಇತರ ಎಲ್ಲಾ ಬಿಸಿಸಿಐ ಪಂದ್ಯಾವಳಿಗಳ ಆಟಗಾರರನ್ನು ಒಳಗೊಂಡಿರುತ್ತದೆ. KSCA ನ ಎಲ್ಲಾ ನೋಂದಾಯಿತ ಆಟಗಾರರಿಗೆ ವರ್ಗ D ಎಂದು ಕಾಯ್ದಿರಿಸಲಾಗಿದೆ.
ಪ್ರತಿ ತಂಡವು ಕನಿಷ್ಠ 15 ಆಟಗಾರರನ್ನು ಹೊಂದಿರಬೇಕು ಮತ್ತು ಆಯಾ ಕ್ಯಾಚ್‌ಮೆಂಟ್ ಪ್ರದೇಶಗಳಿಂದ ಇಬ್ಬರು ಆಟಗಾರರನ್ನು ಒಳಗೊಂಡಂತೆ 20 ಕ್ಕಿಂತ ಹೆಚ್ಚು ಆಟಗಾರರನ್ನು ಹೊಂದಿರಬಾರದು ಎಂದು ಹರಾಜು ಷರತ್ತು ವಿಧಿಸುತ್ತದೆ.
ಮಹಾರಾಜ ಟ್ರೋಫಿಯ ಮೊದಲ ಆವೃತ್ತಿಯು ಕಳೆದ ವರ್ಷ ಅಭೂತಪೂರ್ವ ಯಶಸ್ಸನ್ನು ಕಂಡಿತು. ಈ ವರ್ಷ ಪ್ರಸಾರ ಪಾಲುದಾರರು ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ ಕನ್ನಡ ಮತ್ತು ಒಟಿಟಿ ಪಾಲುದಾರರು ಫ್ಯಾನ್‌ಕೋಡ್ ಹೊಂದಿದೆ. ಹರಜು ಪ್ರಕ್ರಿಯೆ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ವೀಕ್ಷಿಸಬಹುದಾಗಿದೆ. ಮಹಾರಾಜ ಟ್ರೋಫಿಯನ್ನು ಪ್ರತ್ಯೇಕವಾಗಿ ನಿರ್ವಹಿಸಲು ಟಿಸಿಎಂ (TCM) ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಅನ್ನು ನೇಮಿಸಲಾಗಿದೆ.
ಓದಿ: Maharaja Trophy: ಮಹಾರಾಜ ಟ್ರೋಫಿಗೆ ಸೇರಿದ ಶಿವಮೊಗ್ಗ, ಮಂಗಳೂರು ತಂಡ.. ಆಗಸ್ಟ್ನಲ್ಲಿ ಎರಡನೇ ಆವೃತ್ತಿ ಆರಂಭ