ಬೆಂಗಳೂರು: ಮಧ್ಯಮ ಕ್ರಮಾಂಕದಲ್ಲಿ ತಿಪ್ಪಾರೆಡ್ಡಿ ದಾಖಲಿಸಿದ ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಮಂಗಳೂರು ಡ್ರ್ಯಾಗನ್ಸ್ 15 ರನ್‌ಗಳ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಮಂಗಳೂರಿಗೆ ನಾಲ್ಕನೇ ಗೆಲುವು ಇದಾಗಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮಂಗಳೂರು ಪವರ್‌ಪ್ಲೇನಲ್ಲಿ ಎಡವಿತು. ಆರಂಭಿಕರಾದ ಶರತ್ ಬಿ.ಆರ್ (1) ಹಾಗೂ ರೋಹನ್ ಪಟೀಲ್(7) ಅವರನ್ನು ಶಿವಮೊಗ್ಗ ತಂಡದ ನಾಯಕ ಶ್ರೇಯಸ್ ಗೋಪಾಲ್ ಬಹುಬೇಗನೆ ಪೆವಿಲಿಯನ್ಗೆ ಕಳಿಸಿದರು. ಬಳಿಕ ಸಿದ್ಧಾರ್ಥ್ ಕೆ.ವಿ (17) ಮತ್ತು ನವೀನ್ (16) ಆದಿತ್ಯ ಸೋಮಣ್ಣಗೆ ವಿಕೆಟ್ ಒಪ್ಪಿಸಿ ನಿರ್ಗಮಸಿದರು. ಮತ್ತೊಂದೆಡೆ ಮಂಗಳೂರು ಪರ ಚೊಚ್ಚಲ ಪಂದ್ಯವನ್ನಾಡಿದ ತಿಪ್ಪಾರೆಡ್ಡಿ ಕೇವಲ 32 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಆಕರ್ಷಕ ಅರ್ಧಶತಕ ದಾಖಲಿಸಿದರು. ತಿಪ್ಪಾರೆಡ್ಡಿ ಹಾಗೂ ಅನಿರುದ್ಧ್ ಜೋಶಿ ಜೋಡಿ ಐದನೇ ವಿಕೆಟ್ ಪತನದ ವೇಳೆಗೆ ತಂಡದ ಮೊತ್ತ 106ಕ್ಕೆ ತಲುಪಿತು. ಈ ಹಂತದಲ್ಲಿ ತಿಪ್ಪಾ ರೆಡ್ಡಿ (82) ಆದಿತ್ಯ ಸೋಮಣ್ಣಗೆ ಬಲಿಯಾದರು. ಕೆಳ ಕ್ರಮಾಂಕದದಲ್ಲಿ ಅನಿರುದ್ಧ ಜೋಶಿ(34) ಮತ್ತು ಕೆ.ಗೌತಮ್ (16)ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ 7 ವಿಕೆಟ್‌ಗಳ ನಷ್ಟಕ್ಕೆ ಮಂಗಳೂರು ತಂಡ 191 ರನ್ ದಾಖಲಿಸಿತು. ಶಿವಮೊಗ್ಗ ಪರ ಆದಿತ್ಯ ಸೋಮಣ್ಣ (3/38) ಮತ್ತು ಶ್ರೇಯಸ್ ಗೋಪಾಲ್ (2/35) ವಿಕೆಟ್ ಪಡೆದರು.
ದೊಡ್ಡ ಮೊತ್ತ ಬೆನ್ನತ್ತಿದ ಶಿವಮೊಗ್ಗ ಲಯನ್ಸ್ ಸಹ ಮಂಗಳೂರು ಡ್ರ್ಯಾಗನ್ಸ್‌ನಂತೆಯೇ ಕಳಪೆ ಆರಂಭ ಪಡೆಯಿತು. ಸಂಕಲ್ಪ್ ಶೆಟ್ಟೆಣ್ಣವರ್ ಆರಂಭದಲ್ಲೇ ನಿಹಾಲ್ ಉಳ್ಳಾಲ್ (7) ವಿಕೆಟ್ ಪಡೆದು ಮಂಗಳೂರು ತಂಡವನ್ನು ಸಂಕಷ್ಟದಲ್ಲಿ ಸಿಲುಕಿಸಿದರು. ನಂತರ ರೋಹನ್ ನವೀನ್ (11) ಆನಂದ್ ದೊಡ್ಡಮನಿ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಹೊರನಡೆದರು. ಉತ್ತಮ ಲಯದಲ್ಲಿದ್ದ ರೋಹನ್ ಕದಂ (25) ಎಂ.ಜಿ ನವೀನ್ಗೆ ವಿಕೆಟ್ ಒಪ್ಪಿಸಿದರು. 8 ಓವರ್‌ಗಳಲ್ಲಿ ಶಿವಮೊಗ್ಗ ಲಯನ್ಸ್ 3 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತ್ತು.
ನಂತರ ಬಂದ ನಾಯಕ ಶ್ರೇಯಸ್ ಗೋಪಾಲ್ (4) ಬಹುಬೇಗ ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದರು. ರೋಹಿತ್ ಕುಮಾರ್ (23), ಅಭಿನವ್ ಮನೋಹರ್ (25), ಪ್ರಣವ್ ಭಾಟಿಯಾ (39) ರನ್‌ಗಳಿಸಿ ಪ್ರತಿರೋಧ ತೋರಿದರು. ಕೆಳ ಕ್ರಮಾಂಕದಲ್ಲಿ ಕ್ರಾಂತಿ ಕುಮಾರ್ (21) ರನ್ ಕೊಡುಗೆ ನೀಡಿದರಾದರೂ ಶಿವಮೊಗ್ಗದ ಕಮ್ ಬ್ಯಾಕ್ಗೆ ಮಂಗಳೂರು ಬೌಲರ್‌ಗಳು ಅವಕಾಶ ನೀಡಲಿಲ್ಲ. ಅಂತಿಮವಾಗಿ 9 ವಿಕೆಟ್‌ಗಳನ್ನು ಕಳೆದುಕೊಂಡ ಶಿವಮೊಗ್ಗ ಲಯನ್ಸ್ 176 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಮಂಗಳೂರು ಡ್ರ್ಯಾಗನ್ಸ್ 15 ರನ್‌ಗಳ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್, ಮಂಗಳೂರು ಡ್ರ್ಯಾಗನ್ಸ್ ಬ್ಯಾಟಿಂಗ್: ತಿಪ್ಪಾ ರೆಡ್ಡಿ (82), ಅನಿರುದ್ಧ್ ಜೋಶಿ (34) ಬೌಲಿಂಗ್: ಆದಿತ್ಯ ಸೋಮಣ್ಣ - 3/38, ಶ್ರೇಯಸ್ ಗೋಪಾಲ್ - 2/35
ಶಿವಮೊಗ್ಗ ಲಯನ್ಸ್ ಬ್ಯಾಟಿಂಗ್ : ಪ್ರಣವ್ ಭಾಟಿಯಾ (39), ಅಭಿನವ್ ಮನೋಹರ್ (25) ಬೌಲಿಂಗ್: ಪರಸ್ ಗುರ್ಬೌಕ್ಸ್ ಆರ್ಯ - 2/29, ಆನಂದ್ ದೊಡ್ಡಮನಿ - 2/31, ಸಂಕಲ್ಪ್ ಶೆಟ್ಟೆಣ್ಣವರ್ - 2/37.
ಪಂದ್ಯಶ್ರೇಷ್ಠ - ತಿಪ್ಪಾ ರೆಡ್ಡಿ
ಇದನ್ನೂ ಓದಿ: ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಪರಮ್‌ಜೀತ್