ಬೆಂಗಳೂರು : ಮಹಾರಾಜ ಟ್ರೋಫಿ ಟೂರ್ನಿಯ ಆರಂಭಿಕ ಪಂದ್ಯ ಗೆದ್ದರೂ ನಂತರ ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟಿದ್ದ ಗುಲ್ಬರ್ಗಾ ಮಿಸ್ಟಿಕ್ಸ್ ಶಿಸ್ತಿನ ಬೌಲಿಂಗ್ ಮೂಲಕ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಸುಲಭದ ಜಯ ಸಾಧಿಸಿದೆ. ಅಮಿತ್ ವರ್ಮಾ (13ಕ್ಕೆ 2), ಅಭಿಲಾಷ್ ಶೆಟ್ಟಿ (20ಕ್ಕೆ 2) ಮತ್ತು ನಾಯಕ ವೈಶಾಕ್ ವಿಜಯ್‌ಕುಮಾರ್ (31ಕ್ಕೆ 2) ಕರಾರುವಾಕ್ ಬೌಲಿಂಗ್ ನೆರವಿನಿಂದ ಮಂಗಳೂರು ತಂಡವನ್ನು ಗುಲ್ಬರ್ಗಾ 5 ವಿಕೆಟ್‌ಗಳಿಂದ ಸೋಲಿಸಿದೆ.
120 ರನ್‌ಗಳಿಗೆ ಡ್ರ್ಯಾಗನ್ಸ್ ನಿಯಂತ್ರಿಸಿದ ಗುಲ್ಬರ್ಗಾ, ಆರ್. ಸ್ಮರನ್ (62*) ಅಜೇಯ ಆಟದ ನೆರವಿನೊಂದಿಗೆ 17 ಎಸೆತಗಳು ಬಾಕಿ ಇರುವಂತೆಯೇ ಜಯ ದಾಖಲಿಸಿದೆ. ಟಾಸ್ ಗೆದ್ದು ಮೊದಲು ಮಂಗಳೂರು ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಗುಲ್ಬರ್ಗಾ ನಾಯಕ ವೈಶಾಕ್ ವಿಜಯ್‌ಕುಮಾರ್ ನಿರ್ಧಾರಕ್ಕೆ ತಕ್ಕಂತೆ ಬೌಲರ್ಗಳು ಮಾರಕ ದಾಳಿ ನಡೆಸಿದರು.
ಪವರ್‌ಪ್ಲೇ ಅಂತ್ಯದ ವೇಳೆಗೆ ಮಂಗಳೂರು ಡ್ರ್ಯಾಗನ್ಸ್ ತಂಡ 3 ವಿಕೆಟ್ ನಷ್ಟಕ್ಕೆ 36 ರನ್ ಮಾತ್ರ ಗಳಿಸಿತು. ಮಂಗಳೂರು ಬ್ಯಾಟರ್ಗಳಾದ ರೋಹನ್ ಪಾಟೀಲ್ (0), ಬಿ.ಆರ್.ಶರತ್ (7) ಮತ್ತು ಕೆ.ವಿ ಸಿದ್ಧಾರ್ಥ್ (8) ಮೊದಲ ನಾಲ್ಕು ಓವರ್‌ಗಳಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಕೃತಿಕ್ ಕೃಷ್ಣ 14 ಮತ್ತು ಎಂ.ಜಿ ನವೀನ್ 19 ರನ್ ಗಳಿಸಿ ತಂಡದ ಮೊತ್ತಕ್ಕೆ ಕೊಂಚ ಚೇತರಿಕೆ ನೀಡಿದರು.
ಬಳಿಕ 68 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಂಗಳೂರಿಗೆ ಗೌರವ್ ಧಿಮಾನ್ 27 ಆದಿತ್ಯ ಗೋಯಲ್ 22* ಮತ್ತು ಸಂಕಲ್ಪ್ ಶೆಟ್ಟೆನ್ನವರ್ 9* ರನ್ ಕೊಡುಗೆ ನೀಡಿದರು. ಈ ಮೂಲಕ ಮಂಗಳೂರು ಡ್ರ್ಯಾಗನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 120 ರನ್ಗಳನ್ನ ಪೇರಿಸಿತು.
121 ರನ್ ಟಾರ್ಗೆಟ್ ಬೆನ್ನಟ್ಟಿದ ಗುಲ್ಬರ್ಗಾ ಮಿಸ್ಟಿಕ್ಸ್ ಕೂಡ ಆರಂಭಿಕರಾದ ಎಲ್.ಆರ್. ಚೇತನ್ ಹಾಗೂ ಆದರ್ಶ್ ಪ್ರಜ್ವಲ್ ವಿಕೆಟ್ನ್ನು ಬಹುಬೇಗ ಕಳೆದುಕೊಂಡಿತು. ನಂತರ ಜೊತೆಯಾದ ಮ್ಯಾಕ್ನೈಲ್ ನೊರೊನ್ಹಾ ಮತ್ತು ಆರ್.ಸ್ಮರನ್ ಗುಲ್ಬರ್ಗಾ ಮೊತ್ತಕ್ಕೆ ವೇಗ ನೀಡಿದರು. ಈ ಹಂತದಲ್ಲಿ ಮ್ಯಾಕ್ನೈಲ್ ನೊರೊನ್ಹಾ (16) ಅನಿರುದ್ಧ್ ಜೋಶಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಶರತ್ ಶ್ರೀನಿವಾಸ್ (20) ರನ್ ಗಳಿಸಿ ಕೆ.ಗೌತಮ್ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆದರು.
ಆದರೆ, ಮತ್ತೊಂದು ತುದಿಯಲ್ಲಿ ಆರ್.ಸ್ಮರನ್ ಅರ್ಧಶತಕ ದಾಖಲಿಸಿ ಮಿಂಚುವ ಮೂಲಕ ಗುಲ್ಬರ್ಗಾದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಆರ್. ಸ್ಮರನ್ 42 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯರಾಗಿ ಉಳಿಯುವ ಮೂಲಕ ಗುಲ್ಬರ್ಗಾ ಮಿಸ್ಟಿಕ್ಸ್ 5 ವಿಕೆಟ್ ವಿಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್: ಮಂಗಳೂರು ಡ್ರಾಗನ್ಸ್ - 120/9 (20); ಗೌರವ್ ಧಿಮಾನ್ - 27 ರನ್ (22), ಆದಿತ್ಯ ಗೋಯಲ್ - 22* (19), ಅಭಿಲಾಷ್ ಶೆಟ್ಟಿ - 20ಕ್ಕೆ 2 ವಿಕೆಟ್, ಅಮಿತ್ ವರ್ಮಾ - 13ಕ್ಕೆ 2
ಗುಲ್ಬರ್ಗಾ ಮಿಸ್ಟಿಕ್ಸ್ - 121-5 (17.1); ಆರ್.ಸ್ಮರನ್ - 62* ರನ್ (42), ಶರತ್ ಶ್ರೀನಿವಾಸ್ - 20 (17), ಸಂಕಲ್ಪ್ ಶೆಟ್ಟಣ್ಣವರ್ - 12ಕ್ಕೆ 1 ವಿಕೆಟ್, ಅನಿರುದ್ಧ್ ಜೋಶಿ - 18ಕ್ಕೆ 1
ಇದನ್ನೂ ಓದಿ: ಮಹಾರಾಜ ಟ್ರೋಫಿ: ಶಿವಮೊಗ್ಗ ಲಯನ್ಸ್ ಮಣಿಸಿ ಸತತ 5ನೇ ಗೆಲುವು ದಾಖಲಿಸಿದ ಹುಬ್ಬಳ್ಳಿ ಟೈಗರ್ಸ್