ಬೆಂಗಳೂರು: ದೇವದತ್ತ ಪಡಿಕ್ಕಲ್ (78*) ಆಕರ್ಷಕ ಅರ್ಧ ಶತಕ ಮತ್ತು ವಿದ್ವತ್ ಕಾವೇರಪ್ಪ ಮತ್ತು ಮನೋಜ್ ಅವರ ಉತ್ತಮ ಬೌಲಿಂಗ್ ನೆರವಿನಿಂದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 6 ವಿಕೆಟ್ ಅಂತರದ ಜಯ ಸಾಧಿಸಿದೆ.
ಮಹಾರಾಜ ಟ್ರೋಫಿ ಟೂರ್ನಿ 21ನೇ ಪಂದ್ಯದಲ್ಲಿ 145 ರನ್‌ಗಳ ಅಲ್ಪ ಗೆಲುವಿನ ಗುರಿ ಬೆನ್ನಟ್ಟಿದ ಮಿಸ್ಟಿಕ್ಸ್ ತಂಡವು 15 ಎಸೆತ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ದೇವದತ್ತ ಪಡಿಕ್ಕಲ್ ಅಜೇಯ ಅರ್ಧಶತಕ 78 ರನ್ (61 ಎಸೆತ, 7 ಬೌಂಡರಿ 4 ಸಿಕ್ಸರ್) ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೆಂಗಳೂರು ಪರ ಜಗದೀಶ ಸುಚಿತ್ ಹಾಗೂ ರೋನಿತ್ ಮೋರೆ ತಲಾ 1 ವಿಕೆಟ್ ಗಳಿಸಿದರು.
ಬೆಂಗಳೂರು ಸಾಧಾರಣ ಮೊತ್ತ: ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಬೆಂಗಳೂರು 144 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಗುಲ್ಬರ್ಗ ಮಿಸ್ಟಿಕ್ಸ್ ನಾಯಕ ಮನೀಶ್ ಪಾಂಡೆ ನಿರ್ಧಾರಕ್ಕೆ ತಂಡದ ಬೌಲರ್‌ಗಳು ಉತ್ತಮ ಸ್ಪಂದನೆ ತೋರಿದರು. ನಿನ್ನೆ ಶತಕ ಸಿಡಿಸಿದ್ದ ಎಲ್.ಆರ್. ಚೇತನ್ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರಿಂದ ತಂಡದ ರನ್ ಗಳಿಕೆಗೆ ಕಡಿವಾಣ ಬಿದ್ದಿತು.
ಬಳಿಕ ನಾಯಕ ಮಯಾಂಕ್ ಆಗರ್ವಾಲ್ 28, ಕೆ.ವಿ. ಅನೀಶ್ 20, ಶಿವಕುಮಾರ್ ರಕ್ಷಿತ್ 16, ಕ್ರಾಂತಿ ಕುಮಾರ್ 17 ಹಾಗೂ ಜಗದೀಶ ಸುಚಿತ್ 17 ರನ್ ಗಳಿಸಿದರು. ಹೀಗೆ ಪ್ರಮುಖ ಬ್ಯಾಟರ್ಗಳು ಅಲ್ಪ ಮೊತ್ತಕ್ಕೆ ಪೆವಿಲಿಯನ್ ಹಾದಿ ಹಿಡಿದಿದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.
ಮಿಸ್ಟಿಕ್ಸ್ ಮಾರಕ ದಾಳಿ: ಮಿಸ್ಟಿಕ್ಸ್ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ರೀತಿಯ ಬೌಲಿಂಗ್ ಪ್ರದರ್ಶನ ತೋರಿತು. ವಿದ್ವತ್ ಕಾವೇರಪ್ಪ(31ಕ್ಕೆ 3) ಹಾಗೂ ಮನೋಜ್ ಭಾಂಡಗೆ(23ಕ್ಕೆ 3) ಒಟ್ಟು ಆರು ವಿಕೆಟ್ ಹಂಚಿಕೊಂಡರು. ವಾಧ್ವಾನಿ 17 ರನ್‌ಗೆ 2 ವಿಕೆಟ್ ಕಬಳಿಸಿ ಬೆಂಗಳೂರು ತಂಡವನ್ನು ಕಾಡಿದರು.
ಇದನ್ನೂ ಓದಿ: IND vs ZIM ODI: ಧವನ್- ಗಿಲ್ ಜೊತೆಯಾಟ.. ಜಿಂಬಾಬ್ವೆ ವಿರುದ್ಧ 10 ವಿಕೆಟ್ ಜಯ