ಬೆಂಗಳೂರು: ಕ್ವಾಲಿಫೈಯರ್ 2 ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 6 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಪ್ರತಿಷ್ಠಿತ ಮಹಾರಾಜ ಟ್ರೋಫಿ ಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದ ಗುಲ್ಬರ್ಗ ತಂಡದಿಂದ ಫೀಲ್ಡಿಂಗ್ ಆಯ್ಕೆ: ಟಾಸ್ ಗೆದ್ದ ಮಿಸ್ಟಿಕ್ಸ್ ನಾಯಕ ಮನೀಶ್ ಪಾಂಡೆ ಫೀಲ್ಡಿಂಗ್ ಆಯ್ದುಕೊಂಡರು. ವಿಶೇಷವೆಂದರೆ ಟೂರ್ನಿಯಲ್ಲಿ ಇದುವರೆಗೂ ಟಾಸ್ ಗೆದ್ದು ಯಾರೂ ಬ್ಯಾಟಿಂಗ್ ಆಯ್ದುಕೊಂಡಿಲ್ಲ. ಮೈಸೂರು ಬೃಹತ್ ಮೊತ್ತ ದಾಖಲಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ನಾಯಕ ಕರುಣ್ ನಾಯರ್ (42) ಗುರಿ ಸ್ಪಷ್ಟವಾಗಿತ್ತು. ಪ್ರತಿಯೊಂದು ಪಂದ್ಯದಲ್ಲಿ ಮಿಂಚಿದ್ದ ಆರಂಭಿಕ ಆಟಗಾರ ನಿಹಾಲ್ ಉಳ್ಳಾಲ್ 14 ರನ್ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದಾಗಿ ಮೈಸೂರು ಸಂಕಷ್ಟದ ಸ್ಥಿತಿಗೆ ತಲುಪಿತು. ಕರುಣ್ ನಾಯರ್ 32 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.
ಸಾಧಾರಣ ಮೊತ್ತ ಕಲೆ ಹಾಕಿದ ಮೈಸೂರು: ಮಹಾರಾಜ ಟ್ರೋಫಿಯ ಎರಡನೇ ಕ್ವಾಲಿಫಯರ್‌ನಲ್ಲಿ ಫೈನಲ್ ತಲಪುವ ತವಕದಲ್ಲಿದ್ದ ಮೈಸೂರು ವಾರಿಯರ್ಸ್ ತಂಡ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 157 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಉತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದ ಮೈಸೂರು ವಾರಿಯರ್ಸ್ ತಂಡವನ್ನು ಗುಲ್ಬರ್ಗ ಅತ್ಯಲ್ಪ ಮೊತ್ತಕ್ಕೆ ನಿಯಂತ್ರಿಸಿತ್ತು.
ಶ್ರೇಯಸ್ ಗೋಪಾಲ್ ಕಳಪೆ ಪ್ರದರ್ಶನ: ಮೈಸೂರು ತಂಡದ ಬ್ಯಾಟಿಂಗ್ ಬೆನ್ನೆಲುಬಾದ ದೇಶಪಾಂಡೆ 42 ಎಸೆತಗಳನ್ನು ಎದುರಿಸಿ 38 ರನ್ ಗಳಿಸಿದಾಗ ಗುಲ್ಬರ್ಗದ ಬೌಲಿಂಗ್ ಎಷ್ಟು ನಿಖರತೆಯಿಂದ ಕೂಡಿತ್ತು ಎಂಬುದು ಸ್ಪಷ್ಟವಾಗಿತ್ತು. ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ (10), ಶಿವರಾಜ್ (16) ಹೆಚ್ಚು ಕಾಲ ಕ್ರೀಸ್ನಲ್ಲಿ ಉಳಿಯಲಿಲ್ಲ. ನಾಗ ಭರತ್ ಕೇವಲ 12 ಎಸೆತಗಳನ್ನು ಎದುರಿಸಿ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ತಂಡದ ಸಾಧಾರಣ ಮೊತ್ತಕ್ಕೆ ತನ್ನದೇ ಆದ ಕೊಡುಗೆ ನೀಡಿದರು.
ಗುಲ್ಬರ್ಗ ಮಿಸ್ಟಿಕ್ಸ್ ಬೌಲರ್ಸ್ ಕಮಾಲ್: ಗುಲ್ಬರ್ಗ ಮಿಸ್ಟಿಕ್ಸ್ ಪರ ವಿದ್ವತ್ ಕಾವೇರಪ್ಪ ಹಾಗೂ ಕುಶಲ್ ವಾದ್ವಾನಿ ತಲಾ 2 ವಿಕೆಟ್ ಗಳಿಸಿ ಮೈಸೂರಿನ ರನ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಬೃಹತ್ ಮೊತ್ತದ ಗುರಿ ಹೊತ್ತಿದ್ದ ಮೈಸೂರು ವಾರಿಯರ್ಸ್ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 157 ರನ್ ಮಾತ್ರ ಗಳಿಸಿತು.
ಮಹಾರಾಜ ಟ್ರೋಫಿ ಫೈನಲ್ ತಲುಪಿದ ಗುಲ್ಬರ್ಗ: 158 ರನ್ ಗಳ ಜಯದ ಗುರಿಹೊತ್ತ ಗುಲ್ಬರ್ಗ ಮಿಸ್ಟಿಕ್ಸ್ ತಂಡ ದೇವದತ್ತ ಪಡಿಕ್ಕಲ್ ಅಜೇಯ 96 ರನ್‌ಗಳ ನೆರವಿನಿಂದ ಇನ್ನೂ 2 ಎಸೆತ ಬಾಕಿ ಇರುವಾಗಲೇ ಗುರಿ ತಲುಪಿತು. ಮನೋಜ್ ಬಾಂಡಗೆ (35*) ಹಾಗೂ ಪಡಿಕ್ಕಲ್ 80 ರನ್ ಜೊತೆಯಾಟವಾಡಿ ಜಯದ ಹಾದಿಯನ್ನು ಸುಗಮಗೊಳಿಸಿದರು. ದೇವದತ್ತ ಪಡಿಕ್ಕಲ್ 64 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ ಜಯದ ರೂವಾರಿ ಎನಿಸಿದರು.
ಬೆಂಗಳೂರು ವಿರುದ್ಧ ಗುಲ್ಬರ್ಗ ಸೆಣಸಾಟ: ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಪ್ರತಿಷ್ಠಿತ ಮಹಾರಾಜ ಟ್ರೋಫಿಗಾಗಿ ಅಂತಿಮ ಹೋರಾಟ ನಡೆಸಲಿವೆ.
ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 157 (ಕರುಣ್ ನಾಯರ್ 42, ಪವನ್ ದೇಶಪಾಂಡೆ 38, ನಾಗ ಭರತ್ 27* ವಿದ್ವತ್ ಕಾವೇರಪ್ಪ 52ಕ್ಕೆ 2, ಕುಶಲ್ ವಾದ್ವಾನಿ 17ಕ್ಕೆ 2).
ಗುಲ್ಬರ್ಗ ಮಿಸ್ಟಿಕ್ಸ್: 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 158 (ದೇವದತ್ತ ಪಡಿಕ್ಕಲ್ 96*. ಮನೋಜ್ 35* ಪವನ್ ದೇಶಪಾಂಡೆ 16ಕ್ಕೆ 2, ಮೊನೀಶ್ ರೆಡ್ಡಿ 24ಕ್ಕೆ 1)
ಓದಿ: ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆಗೆ ಕೊಕ್