ಬೆಂಗಳೂರು: ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳಿಂದ ಗೆದ್ದಿದೆ. ವಾರಿಯರ್ಸ್ ಪರ ಆರ್.ಸಮರ್ಥ್, ನಾಯಕ ಕರುಣ್ ನಾಯರ್ ಸಮಯೋಚಿತ ಪ್ರದರ್ಶನ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಶಿವಕುಮಾರ್ ರಕ್ಷಿತ್, ಶೋಯೆಬ್ ಮ್ಯಾನೇಜರ್ ನೆರವಿನಿಂದ ಜಯಗಳಿಸಿದೆ. ಇದರೊಂದಿಗೆ ಹುಬ್ಬಳ್ಳಿ ಟೈಗರ್ಸ್ ತಂಡ ಟೂರ್ನಿಯಲ್ಲಿ ಮೊದಲ ಪರಾಜಯ ಎದುರಿಸಿತು.
ಮೈಸೂರು ವಾರಿಯರ್ಸ್‌ನಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಹುಬ್ಬಳ್ಳಿ ಟೈಗರ್ಸ್ ತಂಡದ ಮೊತ್ತ 14 ರನ್‌ಗಳಿದ್ದಾಗ ಆರಂಭಿಕ ಮೊಹಮ್ಮದ್ ತಾಹಾ ವಿಕೆಟ್ ಕಳೆದುಕೊಂಡಿತು. ಮತ್ತೊಂದೆಡೆ ಇನ್ನೋರ್ವ ಆರಂಭಿಕ ಲವನಿತ್ ಸಿಸೋಡಿಯಾ ಟೂರ್ನಿಯಲ್ಲಿ ತಮ್ಮ ಭರ್ಜರಿ ಫಾರ್ಮ್ ಮುಂದುವರೆಸಿದರು. ಲವನಿತ್ ಜೊತೆ 37 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟವಾಡಿದ ನಂತರ ನಾಗಾ ಭರತ್ (12) ಮೈಸೂರು ಸ್ಪಿನ್ನರ್ ಶಶಿಕುಮಾರ್ ಬಲೆಗೆ ಬಿದ್ದರು. ನಂತರ ಬಂದ ಹುಬ್ಬಳ್ಳಿ ತಂಡದ ನಾಯಕ ಮನೀಶ್ ಪಾಂಡೆ ಜೊತೆಗೂಡಿದ ಲವನಿತ್ 49 ಎಸೆತಗಳಲ್ಲಿ 92 ರನ್‌ಗಳ ಜೊತೆಯಾಟವಾಡಿದರು.
ಇದೇ ಸಂದರ್ಭದಲ್ಲಿ ಲವನಿತ್ ಸಿಸೋಡಿಯಾ ಕೇವಲ 59 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದರು. ಮನೀಶ್ ಪಾಂಡೆ (33) ಔಟ್ ಆದ ಬಳಿಕ ಬಂದ ಪ್ರವೀಣ್ ದುಬೆ (16) ರನ್ ಗಳಿಸಿದರು. ಲವನಿತ್ ಸಿಸೋಡಿಯಾ 63 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 105 ರನ್ ಗಳಿಸಿದ್ದಾಗ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ ತನ್ನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಮೈಸೂರು ಪರ ಸಿ.ಎ ಕಾರ್ತಿಕ್ 50 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು.
ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಮೈಸೂರು ವಾರಿಯರ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಆದರೆ ಪವರ್ ಪ್ಲೇ ಅಂತ್ಯವಾದ ಬೆನ್ನಲ್ಲೇ ಸಿಎ ಕಾರ್ತಿಕ್ (29) ಪ್ರವೀಣ್ ದುಬೆಗೆ ಮೊದಲ ಬಲಿಯಾದರು. ನಂತರ ಬಂದ ಕರುಣ್ ನಾಯರ್ (41) ರನ್ ಗಳಿಸಿದರು. ಈ ಹಂತದಲ್ಲಿ ಪುನಃ ದಾಳಿಗಿಳಿದ ಪ್ರವೀಣ್ ದುಬೆ, ಕರುಣ್ ನಾಯರ್ ಹಾಗೂ ಲಂಕೇಶ್ ಕೆ.ಎಸ್ ಅವರನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ನತ್ತ ಕಳಿಸಿದರು.
ಅರ್ಧಶತಕ ದಾಖಲಿಸಿ ಮುನ್ನುಗ್ಗುತ್ತಿದ್ದ ರವಿಕುಮಾರ್ ಸಮರ್ಥ್ (73) 15ನೇ ಓವರ್‌ನಲ್ಲಿ ಮನೀಶ್ ಪಾಂಡೆಯ ಅದ್ಭುತ ರನೌಟಿಗೆ ಬಲಿಯಾದರು. ಮೈಸೂರು ವಾರಿಯರ್ಸ್‌ಗೆ ಅಂತಿಮ ಐದು ಓವರ್‌ಗಳಲ್ಲಿ 42 ರನ್‌ಗಳ ಅಗತ್ಯವಿದ್ದಾಗ ಜೊತೆಯಾದ ಶೋಯೆಬ್ ಮ್ಯಾನೇಜರ್ (21*) ಮತ್ತು ಶಿವಕುಮಾರ್ ರಕ್ಷಿತ್ (22*) ರನ್ ದಾಖಲಿಸುವ ಮೂಲಕ ತಂಡಕ್ಕೆ 6 ವಿಕೆಟ್ ಗಳ ಗೆಲುವು ಧಕ್ಕಿಸಿಕೊಟ್ಟರು.
ಸಂಕ್ಷಿಪ್ತ ಸ್ಕೋರ್ :
ಹುಬ್ಬಳ್ಳಿ ಟೈಗರ್ಸ್ - 185/7 (20)
ಲವನಿತ್ ಸಿಸೋಡಿಯಾ - 105 (63 ಎಸೆತ)
ಮನೀಶ್ ಪಾಂಡೆ - 33 (21)
ಮೈಸೂರು ವಾರಿಯರ್ಸ್ - 188/4 (18.5)
ರವಿಕುಮಾರ್ ಸಮರ್ಥ್ - 73 (42)
ಕರುಣ್ ನಾಯರ್ - 41 (25)
ಇದನ್ನೂ ಓದಿ : ಮಹಾರಾಜ ಟ್ರೋಫಿ: ಶಿವಮೊಗ್ಗ ಲಯನ್ಸ್ ಮಣಿಸಿ ಸತತ 5ನೇ ಗೆಲುವು ದಾಖಲಿಸಿದ ಹುಬ್ಬಳ್ಳಿ ಟೈಗರ್ಸ್