ಮುಲ್ಹೆಮ್ ಆ್ಯನ್ ಡರ್ ರುಹ್ರ್ (ಜರ್ಮನಿ): ಭಾರತದ ಭರವಸೆಯ ಶಟ್ಲರ್, ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಜರ್ಮನ್ ಓಪನ್ ಸೆಮಿಫೈನಲ್ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ ಜಯ ಸಾಧಿಸಿ, ಜರ್ಮನ್ ಓಪನ್ ಸೂಪರ್ 300 ಟೂರ್ನಮೆಂಟ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಮೊದಲ ಭಾರತೀಯ ಎಂಬ ಶ್ರೇಯ ಕೂಡ ಅವರ ಪಾಲಾಗಿದೆ.
ಶನಿವಾರ ನಡೆದ ಫೈನಲ್ನಲ್ಲಿ 20 ವರ್ಷದ ಲಕ್ಷ್ಯ 21-13, 12-21,22-20ರಲ್ಲಿ ವಿಶ್ವದ ನಂಬರ್ ಶಟ್ಲರ್ ಡೆನ್ಮಾರ್ಕ್ನ ಆಕ್ಸೆಲ್ಸನ್ ವಿರುದ್ಧ ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 2-1ರ ಗೇಮ್ಗಳ ರೋಚಕ ಜಯ ಸಾಧಿಸಿದರು.
ಡಿಸೆಂಬರ್ನಲ್ಲಿ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ, ಈ ವರ್ಷದಲ್ಲಿ ಜನವರಿಯಲ್ಲಿ ಇಂಡಿಯಾ ಓಪನ್ ಸೂಪರ್ 500 ಟೈಟಲ್ ಜಯಸಿರುವ ಲಕ್ಷ್ಯ ತಮ್ಮ ಅಮೋಘ ಫಾರ್ಮ್ಅನ್ನು ಮುಂದುವರಿಸಿದ್ದಾರೆ.
ವಿಶ್ವದ 12ನೇ ಶ್ರೇಯಾಂಕದ ಲಕ್ಷ್ಯ ಶನಿವಾರ ನಡೆದ ಪಂದ್ಯಕ್ಕೂ ಮುನ್ನ 0-4ರಲ್ಲಿ ವಿಕ್ಟರ್ ವಿರುದ್ಧ ಸೋಲಿನ ಹಿನ್ನಡೆ ಅನುಭವಿಸಿದ್ದರು. ಕೊನೆಗೂ ಟಾಪ್ ಆಟಗಾರನನ್ನು ಮಣಿಸುವ ಮೂಲಕ ಜರ್ಮನ್ ಓಪನ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಸೇನ್ ಪ್ರಶಸ್ತಿ ಸುತ್ತಿನಲ್ಲಿ ಥಾಯ್ಲೆಂಡ್ನ ಕುನ್ಲಾವತ್ ವಿತಿದ್ಸರ್ನ್ ವಿರುದ್ಧ ಭಾನುವಾರ ಪೈಪೋಟಿ ನಡೆಸಲಿದ್ದಾರೆ. ಕುನ್ಲಾವತ್ ಸೆಮಿಫೈನಲ್ನಲ್ಲಿ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಗೆಲುವು ಸಾಧಿಸಿದರು.
ಇದನ್ನೂ ಓದಿ:ಬುಮ್ರಾಗೆ 5 ವಿಕೆಟ್; 109ಕ್ಕೆ ಆಲೌಟ್ ಆದ ಶ್ರೀಲಂಕಾ, ಭಾರತಕ್ಕೆ 143ರನ್ಗಳ ಮುನ್ನಡೆ