ನವದೆಹಲಿ : ಗಂಭೀರ ಮಂಡಿ ಗಾಯಕ್ಕೆ ತುತ್ತಾಗಿರುವ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಐಪಿಎಲ್ ತ್ಯಜಿಸಿ ಯುಎಇಯಿಂದ ಭಾರತಕ್ಕೆ ಮರಳಿದ್ದಾರೆ. ಇವರು ಅಕ್ಟೋಬರ್ನಿಂದ ಶುರುವಾಗಲಿರುವ ಡೊಮೆಸ್ಟಿಕ್ ಕ್ರಿಕೆಟ್ನಲ್ಲೂ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಭಾರತ ತಂಡದಿಂದ ಈಗಾಗಲೇ ಹೊರ ಬಿದ್ದಿರುವ ಕುಲ್ದೀಪ್ ಯಾದವ್ ಕೋಲ್ಕತ್ತಾ ನೈಟರ್ ರೈಡರ್ಸ್ ತಂಡದಲ್ಲಿದ್ದರು. ಇದೀಗ ಗಂಭೀರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಸ್ಪರ್ಧಾತ್ಮಕ ಕ್ರಿಕೆಟ್ಗೆ ದೀರ್ಘಾವಧಿಯ ಪುನಶ್ಚೇತನಕ್ಕೆ ಒಳಗಾದ ನಂತರ ಮರಳಬಹುದು ಎಂದು ಬಿಸಿಸಿಐ ಮೂಲ ತಿಳಿಸಿದೆ.
"ಹೌದು, ಯುಎಇಯಲ್ಲಿ ಅಭ್ಯಾಸ ಮಾಡುವ ವೇಳೆ ಕುಲ್ದೀಪ್ ಯಾದವ್ ಮಂಡಿ ನೋವಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ಅವರು ಐಪಿಎಲ್ನ ಉಳಿದ ಭಾಗದಲ್ಲಿ ಆಡುವುದಕ್ಕೆ ಸಾಧ್ಯವಲ್ಲದ ಕಾರಣ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಕುಲ್ದೀಪ್ ಯಾದವ್ ಮುಂಬೈನಲ್ಲಿ ಮಂಡಿ ಸರ್ಜರಿಗೆ ಒಳಗಾಗಲಿದ್ದು, ಅವರು ಚೇತರಿಸಿಕೊಳ್ಳಲು ಮೂರರಿಂದ ನಾಲ್ಕು ತಿಂಗಳು ಸಮಯ ಬೇಕಾಗಬಹುದು. ಅಲ್ಲದೆ ಮಂಡಿ ಸಂಬಂಧಿತ ಗಾಯಗಳು ಕ್ರೀಡಾಪುಟಗಳಿಗೆ ತುಂಬಾ ಕೆಟ್ಟದಾಗಿರುತ್ತದೆ.
ಅವರು ಸಾಕಷ್ಟು ಕಠಿಣ ಪರಿಶ್ರಮವಹಿಸಿ ಮತ್ತೆ ತಮ್ಮ ಬಲವನ್ನು ಮರಳಿ ಪಡೆಯಬೇಕು. ಹಾಗಾಗಿ, ಅವರು ರಣಜಿ ಟ್ರೋಫಿ ಮುಗಿಯುವುದರೊಳಗೆ ಕುಲ್ದೀಪ್ ಪಂದ್ಯವನ್ನಾಡಲು ಸಿದ್ಧರಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.