ನವದೆಹಲಿ : ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ದಂಪತಿಯ ಪುತ್ರಿ ವಮಿಕಾ ಭಾರತ-ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದ ವೇಳೆ ನೇರ ಪ್ರಸಾರದಲ್ಲಿ ಕಾಣಿಸಿಕೊಂಡಿದ್ದು, ಗಂಟೆಯೊಳಗೆ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದೆ.
ಆದರೆ, ತಮ್ಮ ಮಗಳನ್ನು ಸಾಮಾಜಿಕ ಜಾಲತಾಣದಿಂದ ದೂರವಿರಿಸಲು ನಿರ್ಧರಿಸಿದ್ದ ಕೊಹ್ಲಿ ದಂಪತಿ, ತಮಗೆ ಪಂದ್ಯದ ವೇಳೆ ಕ್ಯಾಮೆರಾದಲ್ಲಿ ತಮ್ಮನ್ನು ಮತ್ತು ವಮಿಕಾರನ್ನು ಸೆರೆಹಿಡಿಯುತ್ತಿರುವ ಬಗ್ಗೆ ಅರಿವಿಗೆ ಬಂದಿರಲಿಲ್ಲ. ದಯವಿಟ್ಟು ತಮ್ಮ ಪೋಸ್ಟ್ಗಳನ್ನು ಡಿಲೀಟ್ ಮಾಡಿ ಎಂದು ಅಭಿಮಾನಿಗಳಿಗೆ ಮತ್ತು ಮಾಧ್ಯಮಕ್ಕೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ ಅನುಷ್ಕಾ.
ಭಾನುವಾರ ಅನುಷ್ಕಾ ಶರ್ಮಾ ವಿಐಪಿ ಸ್ಟ್ಯಾಂಡ್ನಲ್ಲಿ ನಿಂತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಕೊಹ್ಲಿ ಅರ್ಧಶತಕ ಸಿಡಿಸಿದ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಮತ್ತು ವಮಿಕಾ ನಿಂತಿದ್ದ ಕಡೆಗೆ ತಿರುಗಿ ಸಂಭ್ರಮಿಸಿದ್ದರು. ಈ ಕ್ಷಣ ನೇರ ಪ್ರಸಾರದಲ್ಲಿ ಪ್ರಸಾರವಾಗಿ ಒಂದು ವರ್ಷದಿಂದ ಮಗುವಿನ ಮುಖವನ್ನು ಸಾಮಾಜಿಕ ಜಾಲಾತಾಣದಿಂದ ದೂರವಿರಿಸಿದ್ದ ಫೋಟೋ ಬಹಿರಂಗಗೊಂಡಿತ್ತು.
ಮಗಳ ಫೋಟೋ ವೈರಲ್ ಆಗಿರುವುದು ತಮ್ಮ ಅರಿವಿಗೆ ಬಂದ ತಕ್ಷಣ ವಿರುಷ್ಕಾ ದಂಪತಿ ತಮ್ಮ ಅಭಿಮಾನಿಗಳಿಗೆ ಮಗಳ ಫೋಟೋವನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. "ಹೆಲೋ ಗಾಯ್ಸ್, ನಿನ್ನೆ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ನಮ್ಮ ಮಗಳ ಫೋಟೊವನ್ನು ಸೆರೆಹಿಡಿಯಲಾಗಿದ್ದು ಮತ್ತು ವ್ಯಾಪಕವಾಗಿ ಹಂಚಿಕೊಂಡಿರುವ ವಿಚಾರ ನಮ್ಮ ಅರಿವಿಗೆ ಬಂದಿದೆ.
ಆ ಸಂದರ್ಭಧಲ್ಲಿ ಕ್ಯಾಮೆರಾ ನಮ್ಮನ್ನು ಸೆರೆಯಿಡಿಯುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ನಾವು ಎಲ್ಲರಿಗೂ ತಿಳಿಸಲು ಬಯಸುತ್ತೇವೆ. ನಾವು ಹಿಂದೆ ವಿವರಿಸಿದಂತೆ ವಮಿಕಾ ಅವರ ಚಿತ್ರಗಳನ್ನು ಕ್ಲಿಕ್ ಮಾಡದಿದ್ದರೆ ಮತ್ತು ಪ್ರಕಟಿಸದಿದ್ದರೆ ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ. ಈ ವಿಚಾರದಲ್ಲಿ ನಮ್ಮ ನಿಲುವು ಮತ್ತು ಕೋರಿಕೆ ಒಂದೇ ಆಗಿದೆ. ಧನ್ಯವಾದಗಳು"ಎಂದು ಕೊಹ್ಲಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆದರೆ, ಕೊಹ್ಲಿ ದಂಪತಿ ಮಗಳ ಫೋಟೊಗಳನ್ನು ಡಿಲೀಟ್ ಮಾಡಲು ಮನವಿ ಮಾಡಿರುವುದು ನೆಟ್ಟಿಗರ ಕೋಪಕ್ಕೂ ಕಾರಣವಾಗಿದೆ. ಅಂತಾರಾಷ್ಟ್ರೀಯ ಪಂದ್ಯ ನೇರ ಪ್ರಸಾರದ ವೇಳೆ ಏಕೆ ಕ್ಯಾಮೆರಾ ಮುಂದು ಕಣ್ಣಿಗೆ ಕಾಣಿಸಿಕೊಳ್ಳಬೇಕಿತ್ತು ಎಂದು ಕಿಡಿ ಕಾರಿದ್ದಾರೆ. ಕಳೆದ ತಿಂಗಳು ಕೂಡ ವಿಮಾನ ನಿಲ್ದಾಣದಲ್ಲಿ ಕೆಲವು ಮಾಧ್ಯಮದ ಕ್ಯಾಮೆರಾಮೆನ್ಗಳು ಆಟಗಾರರ ಫೋಟೋ ತೆಗೆಯುವಾಗ ಕೊಹ್ಲಿ ಮಗಳ ಫೋಟೋ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದಲ್ಲಿ ಪ್ರಕಟಿಸದಂತೆ ವಿರುಷ್ಕಾ ದಂಪತಿ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ:2ನೇ ಬಾರಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಪಡೆದ ಮಂಧಾನ.. ಈ ವರ್ಷ ಏಕೈಕ ಭಾರತೀಯೆ