ಕರಾಚಿ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತುಂಗದ ಶಿಖರದಲ್ಲಿದ್ದಾರೆ. ಶೀಘ್ರದಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಶತಕ ಬಾರಿಸುವುದನ್ನು ಶುರು ಮಾಡಲಿದ್ದಾರೆ ಎಂದು ಪಾಕಿಸ್ತಾನ ಲೆಜೆಂಡರಿ ಬ್ಯಾಟ್ಸ್ಮನ್ ಮೊಹಮದ್ ಯೂಸುಫ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಮಾದರಿಯ ಕ್ರಿಕೆಟ್ನಲ್ಲಿ ಶತಕ ಬಾರಿಸಿಲ್ಲ. ಅವರು 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಡೇ ಅಂಡ್ ನೈಟ್ ಟೆಸ್ಟ್ನಲ್ಲಿ ಕೊನೆಯ ಶತಕ ಬಾರಿಸಿದ್ದರು. ಎಲ್ಲಾ ಮಾದರಿಯಲ್ಲಿ 70 ಶತಕ ಸಿಡಿಸಿರುವ ಕೊಹ್ಲಿಯಿಂದ ಮತ್ತಷ್ಟು ಶತಕಗಳು ಶೀಘ್ರದಲ್ಲೇ ಹೊರ ಬರಲಿವೆ ಎಂದು ಯೂಸುಫ್ ಹೇಳಿದ್ದಾರೆ.
ಕೊಹ್ಲಿಗೆ ಕೇವಲ 32 ವರ್ಷ ಮತ್ತು ಈ ವಯಸ್ಸಿಗೆ ಅವರು ಟಾಪ್ ಬ್ಯಾಟ್ಸ್ಮನ್ ಆಗಿ ಸಾಕಷ್ಟು ಎತ್ತರಕ್ಕೇರಿದ್ದಾರೆ. ಅವರು ಮತ್ತೆ ಶತಕಗಳನ್ನು ಬಾರಿಸಲು ಕೆಲವು ಸಮಯ ತೆಗೆದುಕೊಂಡಿದ್ದಾರೆ, ಮತ್ತೆ ಮುಂದಿನ ದಿನಗಳಲ್ಲು ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಅವರು ಶತಕ ಸಿಡಿಸಲಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನನ್ನ ಪ್ರಕಾರ 32 ವರ್ಷಕ್ಕೆ ಕೊಹ್ಲಿ ಈಗ ಏನು ಸಾಧನೆ ಮಾಡಿದ್ದಾರೋ ಅದು ಅಸಾಧಾರಣವಾದದ್ದು. ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಈಗಾಗಲೇ 70 ಶತಕ ಸಿಡಿಸಿರುವುದು ದೊಡ್ಡ ಹಿರಿಮೆ ಎಂದು ಪಾಕಿಸ್ತಾನ ಪರ 90 ಟೆಸ್ಟ್ ಮತ್ತು 288 ಏಕದಿನ ಪಂದ್ಯಗಳನ್ನಾಡಿರುವ ಯೂಸುಫ್ ಹೇಳಿದ್ದಾರೆ.
ಇನ್ನು, ಒಂದೇ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್(1788) ಸಿಡಿಸಿರುವ ದಾಖಲೆಯನ್ನು ಈಗಲೂ ತಮ್ಮ ಹೆಸರಿನಲ್ಲಿಯೇ ಇರಿಸಿಕೊಂಡಿರುವ ಯೂಸುಫ್, ಕೊಹ್ಲಿಯನ್ನು ಲೆಜೆಂಡರಿ ಸಚಿನ್ ತೆಂಡೂಲ್ಕರ್ರೊಂದಿಗೆ ಹೋಲಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ.
"ಕೊಹ್ಲಿ ಸಾಧಿಸಿದ್ದಾರೆ, ಅವರ ಸಾಧನೆಯನ್ನು ಎಷ್ಟು ಪ್ರಶಂಸಿದರೂ ಕಡಿಮೆಯೇ. ಆದರೆ, ನಾನು ಸಚಿನ್ರೊಂದಿಗೆ ಹೋಲಿಕೆ ಮಾಡುವುದನ್ನು ಬಯಸಲ್ಲ. ಯಾಕೆಂದರೆ, ಸಚಿನ್ ಸಂಪೂರ್ಣ ವಿಭಿನ್ನ ವರ್ಗದವರಾಗಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಬಾರಿಸಿದ್ದಾರೆ. ಜೊತೆಗೆ ಅವರ ಕಾಲದಲ್ಲಿ ಎಂತಹ ಬೌಲರ್ಗಳನ್ನು ಎದುರಿಸಿದ್ದಾರೆ ಎನ್ನುವುದನ್ನು ಮನದಲ್ಲಿಟ್ಟುಕೊಳ್ಳಬೇಕು" ಎಂದು ಪಾಕಿಸ್ತಾನ ಮಾಜಿ ನಾಯಕ ಹೇಳಿದ್ದಾರೆ.