ಪಾರ್ಲ್(ದಕ್ಷಿಣ ಆಫ್ರಿಕಾ) : ಟೀಂ ಇಂಡಿಯಾ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರನ್ ಬರ ಎದುರಿಸುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಕೋಚ್ ರಾಹುಲ್ ದ್ರಾವಿಡ್ ನಿರ್ಮಿಸಿದ್ದ ಬೇಡದ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕೇಶವ್ ಮಹಾರಾಜ್ ಎಸೆದ ಓವರ್ನಲ್ಲಿ ಬವುಮಾಗೆ ಸುಲಭ ಕ್ಯಾಚ್ ನೀಡಿ, ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 14 ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವ ಅನಗತ್ಯ ದಾಖಲೆ ಬರೆದಿದ್ದಾರೆ. ಜೊತೆಗೆ 50 ಓವರ್ಗಳ ಕ್ರಿಕೆಟ್ನಲ್ಲಿ ಸ್ಪಿನ್ನರ್ ಓವರ್ನಲ್ಲಿ ಮಾಜಿ ಕ್ಯಾಪ್ಟನ್ ರನ್ಗಳಿಕೆ ಮಾಡದೇ ವಿಕೆಟ್ ನೀಡಿರುವುದು ಇದೇ ಮೊದಲ ಸಲ ಆಗಿದೆ.
ಇದನ್ನೂ ಓದಿರಿ: 2022ರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ರಾಹುಲ್-ಆಥಿಯಾ ಶೆಟ್ಟಿ?
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಹರಿಣಗಳ ತಂಡ ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದು, ಇಂದಿನ ಪಂದ್ಯ ರಾಹುಲ್ ಪಡೆಗೆ ಮಾಡು ಇಲ್ಲವೇ ಮಡಿ ಆಗಿದೆ. ಈ ಮಹತ್ವಪೂರ್ಣ ಪಂದ್ಯದಲ್ಲಿ ವಿರಾಟ್ ಸುಲಭ ವಿಕೆಟ್ ಒಪ್ಪಿಸಿದ್ದಾರೆ.
ದ್ರಾವಿಡ್ ಅನಗತ್ಯ ದಾಖಲೆ ಹಿಂದಿಕ್ಕಿದ ಕೊಹ್ಲಿ
ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕೋಚ್ ದ್ರಾವಿಡ್ ಹಾಗೂ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಅವರ ಅನಗತ್ಯ ದಾಖಲೆ ಹಿಂದಿಕ್ಕಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಭಾರತೀಯ ಪ್ಲೇಯರ್ಸ್
- ಸಚಿನ್ ತೆಂಡೂಲ್ಕರ್- 20 ಸಲ
- ಜಾವಗಲ್ ಶ್ರೀನಾಥ್-19
- ಅನಿಲ್ ಕುಂಬ್ಳೆ-18
- ಯುವರಾಜ್ ಸಿಂಗ್-18
- ಹರ್ಭಜನ್ ಸಿಂಗ್-17
- ಸೌರವ್ ಗಂಗೂಲಿ-16
- ಜಹೀರ್ ಖಾನ್-14
- ವಿರಾಟ್ ಕೊಹ್ಲಿ-14
- ಸುರೇಶ್ ರೈನಾ-14
- ರಾಹುಲ್ ದ್ರಾವಿಡ್-13
- ಕಪಿಲ್ ದೇವ್-13
ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಕಳೆದ 64 ಇನ್ನಿಂಗ್ಸ್ಗಳಲ್ಲಿ 7 ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ