ಗುವಾಹಟಿ: ಮನೀಶ್ ಪಾಂಡೆ ಮತ್ತು ಕರುಣ್ ನಾಯರ್ ಅವರ ಅಬ್ಬರದ ಅರ್ಧಶತಕ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ನಲ್ಲಿ ಮುಂಬೈ ವಿರುದ್ಧ 9 ರನ್ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಇಂದಿನಿಂದ ಆರಂಭವಾಗಿರುವ ಟೂರ್ನಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್(0) ಮತ್ತು ದೇವದತ್ ಪಡಿಕ್ಕಲ್(5) ವಿಫಲರಾದರು. ಆದರೆ ನಾಯಕ ಮನೀಶ್ ಪಾಂಡೆ 64 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 84 ರನ್ಗಳಿಸಿದರೆ, ಇವರಿಗೆ ಸಾಥ್ ನೀಡಿದ ಕರುಣ್ ನಾಯರ್ 53 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 72 ರನ್ಗಳಿಸಿದ್ದಲ್ಲದೆ, 3ನೇ ವಿಕೆಟ್ ಜೊತೆಯಾಟದಲ್ಲಿ149 ರನ್ ಸೇರಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ತಂಡಕ್ಕೆ ನೆರವಾದರು.
ಮುಂಬೈ ಪರ ಮೋಹಿತ್ ಅವಸ್ತಿ 32 ರನ್ ನೀಡಿ 2 ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ 38 ರನ್ ನೀಡಿ 2 ವಿಕೆಟ್ ಪಡೆದರು.
ರಹಾನೆ ಏಕಾಂಗಿ ಹೋರಾಟ ವ್ಯರ್ಥ
167 ರನ್ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ಗಳಿಸಲಷ್ಟೇ ಶಕ್ತವಾಗಿ 9 ರನ್ಗಳ ಸೋಲು ಕಂಡಿತು. ಸ್ಫೋಟಕ ಆಟಕ್ಕೆ ಹೆಸರಾದ ಪೃಥ್ವಿ ಶಾ (4) ಜೈಸ್ವಾಲ್(13) ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ 3ನೇ ವಿಕೆಟ್ಗೆ ಸಿದ್ಧಾರ್ಥ್ ಲಾಡ್ ಜೊತೆ ಸೇರಿದ ರಹಾನೆ 81 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು.
ಆದರೆ 54 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 75 ರನ್ಗಳಿಸಿದ್ದ ರಹಾನೆ ಔಟಾಗುತ್ತಿದ್ದಂತೆ ಕರ್ನಾಟಕ ತಂಡ ಮೇಲುಗೈ ಸಾಧಿಸಿತು. ರಹಾನೆ ನಂತರ ಬಂದ ಯಾವುದೇ ಬ್ಯಾಟರ್ಗಳನ್ನು ದೊಡ್ಡ ಮೊತ್ತ ಗಳಿಸಿದಂತೆ ಕರ್ನಾಟಕ ಬೌಲರ್ಗಳು ಯಶಸ್ವಿಯಾದರು.
ಸಿದ್ಧಾರ್ಥ್ ಲಾಡ್ 25 ಎಸೆತಗಳಲ್ಲಿ 32, ದುಬೆ 3, ಅಮನ್ ಖಾನ್ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಆದಿತ್ಯ ತಾರೆ ಅಜೇಯ 12, ಅಥರ್ವ ಅಂಕೋಲೆಕರ್ ಅಕೇಯ 13 ರನ್ಗಳಿಸಿದರಾದರೂ ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ.
ಇದನ್ನು ಓದಿ:ಬಿಗ್ಬ್ಯಾಷ್ ಲೀಗ್ನಲ್ಲಿ ಆಡಲಿದ್ದಾರೆ ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆದ್ದುಕೊಟ್ಟಿದ್ದ ನಾಯಕ!