ಚಂಡೀಗಢ: ಏಷ್ಯಾಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೌದ್ರಾವತಾರ ತೋರಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾರನ್ನು ಲೆಜೆಂಡರಿ ಕ್ರಿಕೆಟರ್ ಕಪಿಲ್ ದೇವ್ ಅವರು ಹಾಡಿ ಹೊಗಳಿದ್ದಾರೆ. ಪಾಂಡ್ಯಾ ಒಬ್ಬ ಶ್ರೇಷ್ಠ ಕ್ರೀಡಾಪಟು ಎಂದೂ ಬಣ್ಣಿಸಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಹಾರ್ದಿಕ್ ಪಾಂಡ್ಯಾ ಅವರಂತಹ ಶ್ರೇಷ್ಠ ಆಲ್ರೌಂಡರ್ಗಳ ಸ್ಥಿರ ಪ್ರದರ್ಶನ ತಂಡಕ್ಕೆ ಅನುಕೂಲ. ಪಾಂಡ್ಯಾ ಹಾಗೂ ರವೀಂದ್ರ ಜಡೇಜಾ ಅವರು ಬ್ಯಾಟಿಂಗ್, ಬೌಲಿಂಗ್ನಲ್ಲಿ ಮಿಂಚಿದರು. ಇಬ್ಬರೂ ಮಹಾನ್ ಆಟಗಾರರು ಎಂದು ಮೆಚ್ಚುಗೆ ಬಣ್ಣಿಸಿದರು.
ಯಾವುದೇ ಆಲ್ರೌಂಡರ್ಗಳು ತಂಡಕ್ಕೆ ಕೇಕ್ ಮೇಲಿನ ಚೆರ್ರಿ ಇದ್ದಂತೆ. ಹಾರ್ದಿಕ್ ಮತ್ತು ಜಡೇಜಾ ಅವರ ಆಟ ನಿಜಕ್ಕೂ ಅದ್ಭುತ. ಹಾರ್ದಿಕ್ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಆತನ ಆಟ ತಂಡಕ್ಕೆ ಎಂದಿಗೂ ಪ್ಲಸ್ ಆಗಿರುತ್ತದೆ. ಗಾಯಗೊಂಡಾಗ ಇಡೀ ತಂಡಕ್ಕೆ ನಷ್ಟವಾಗುತ್ತದೆ. ಆತನ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ, ಪಾಂಡ್ಯಾ ಪ್ರತಿ ಬಾರಿ ಗಾಯಕ್ಕೀಡಾಗುವುದು ಬೇಸರದ ಸಂಗತಿ ಎಂದು ಕಪಿಲ್ ದೇವ್ ಹೇಳಿದರು.
ವರ್ಷದ ಹಿಂದೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಪಾಂಡ್ಯಾ ಗಾಯದಿಂದ ಕ್ರಿಕೆಟ್ನಿಂದಲೇ ದೂರವುಳಿದಿದ್ದರು. ಚೇತರಿಕೆ ಬಳಿಕ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಮಾಡಿದರು. ಮೊನ್ನೆ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ನಲ್ಲಿ 3 ವಿಕೆಟ್ ಪಡೆದರೆ, ಬ್ಯಾಟಿಂಗ್ನಲ್ಲೂ ಮಿಂಚಿ 33 ರನ್ ಗಳಿಸಿದರು. ಹಾರ್ದಿಕ್ರ ಗೆಲುವಿನ ಹೊಡೆತಕ್ಕೂ ಮುನ್ನ ಅವರು ತೋರಿದ ಆತ್ಮವಿಶ್ವಾಸ ಸಂದೇಶ ಭಾರೀ ವೈರಲ್ ಆಗಿತ್ತು.
ವಿರಾಟ್ ಬೇಗ ಲಯಕ್ಕೆ ಬರ್ತಾರೆ: ಇದೇ ವೇಳೆ ವಿರಾಟ್ ಕೊಹ್ಲಿ ಅವರ ಲಯದ ಬಗ್ಗೆಯೂ ಮಾತನಾಡಿದ ಕಪಿಲ್ ದೇವ್ ಅವರು, ವಿರಾಟ್ ವಿಶ್ವಕಂಡ ಶ್ರೇಷ್ಠ ಕ್ರಿಕೆಟಿಗ. ಅವರು ಪಾಕಿಸ್ತಾನ ವಿರುದ್ಧ ಆಡಿದ ಆಟವನ್ನು ನೋಡಿದರೆ ಬಹುಬೇಗನೇ ಫಾರ್ಮ್‌ಗೆ ಬರುತ್ತಾರೆ ಎಂಬ ವಿಶ್ವಾಸವಿದೆ. ಇನ್ನವರು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ವಿರಾಟ್ ಕಮ್ಬ್ಯಾಕ್ ಮಾಡುವುದನ್ನು ನೋಡಲು ಕಾತರನಾಗಿದ್ದೇನೆ. ವಿರಾಟ್ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ತಾನು ದೇಶಕ್ಕಾಗಿ ಆಡುತ್ತಿದ್ದೇನೆ ಎಂದು ಗಮನದಲ್ಲಿಟ್ಟುಕೊಂಡು ಆಡಬೇಕು. ಇದು ಎಲ್ಲಕ್ಕಿಂತ ದೊಡ್ಡದಾದ ಚಿಂತನೆಯಾಗಿದೆ ಎಂದು ಹೇಳಿದರು.
ಯಾವುದೇ ಆಟಗಾರ ಪ್ರತಿ ಪಂದ್ಯದಲ್ಲೂ ರನ್ ಗಳಿಸುವುದಿಲ್ಲ. ಶೂನ್ಯಕ್ಕೂ ಔಟಾಗಲ್ಲ. ಸಾಮರ್ಥ್ಯ, ಪ್ರತಿಭೆಯಿಂದಾಗಿ ಫಾರ್ಮ್‌ಗೆ ಮರಳಲು ಕೊಹ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಶೀಘ್ರವೇ ದೊಡ್ಡ ಇನಿಂಗ್ಸ್ ಕಟ್ಟಲಿದ್ದಾರೆ. ಆ ನಂಬಿಕೆ ನನಗಿದೆ ಎಂದು ಕಪಿಲ್ ದೇವ್ ಹೇಳಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಶತಕವಿಲ್ಲದೇ 1 ಸಾವಿರಕ್ಕೂ ಅಧಿಕ ದಿನಗಳನ್ನು ಕಳೆದಿದ್ದಾರೆ. ಫಾರ್ಮ್‌ಗೆ ಮರಳಲು ಪ್ರಯತ್ನಿಸುತ್ತಿರುವ ವಿರಾಟ್ ಪಾಕಿಸ್ತಾನ ಪಂದ್ಯದಲ್ಲಿ 35 ರನ್ ಗಳಿಸಿದ್ದಾರೆ.
ಓದಿ: ಧೋನಿಗೆ ಪಾಂಡ್ಯ ಹೋಲಿಕೆ: ಟೀಂ ಇಂಡಿಯಾ ಮುನ್ನಡೆಸುವ ಸಾಮರ್ಥ್ಯವಿದೆ ಎಂದ ಭಜ್ಜಿ