ಮುಂಬೈ : ಮಹಿಳಾ ಕ್ರಿಕೆಟ್ ಬೆಳವಣಿಗೆಯ ದೃಷ್ಟಿಯಿಂದ ಇಂಗ್ಲೆಂಡ್ ಕ್ರಿಕೆಟ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಹಂಡ್ರೆಡ್ ಲೀಗ್ನಲ್ಲಿ ಭಾಗವಹಿಸಲು ಬಿಸಿಸಿಐ ನಾಲ್ವರು ಮಹಿಳಾ ಕ್ರಿಕೆಟರ್ಗಳಿಗೆ ನಿರಪೇಕ್ಷಣಾ ಪತ್ರವನ್ನು ನೀಡಿದೆ.
ಈ ವಿಚಾರವನ್ನು ಬಿಸಿಸಿಐ ಅಧಿಕಾರಿಗಳು ಖಚಿತಪಡಿಸಿದ್ದು, ನೂರು ಎಸೆತಗಳ ಟೂರ್ನಿಗೆ ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್ ಹಾಗೂ ಆಲ್ರೌಂಡರ್ ದೀಪ್ತಿ ಶರ್ಮಾ ಅವರಿಗೆ ಬಿಸಿಸಿಐ ಎನ್ಒಸಿ ನೀಡಿದೆ.
ನಾವು ಹರ್ಮನ್ ಪ್ರೀತ್ ಕೌರ್, ಸ್ಮೃತಿ, ಜೆಮಿಮಾ ಮತ್ತು ದೀಪ್ತಿಗೆ ಎನ್ಒಸಿ ನೀಡಿದ್ದೇವೆ, ಈ ಆಟಗಾರ್ತಿಯರು ಲೀಗ್ನಲ್ಲಿ ಭಾಗವಹಿಸುವುದರಿಂದ ಒಳ್ಳೆಯ ಅನುಭವ ಪಡೆಯಲಿದ್ದಾರೆ ಎಂದು ಐಎನ್ಎಸ್ಗೆ ಆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದಿ ಹಂಡ್ರೆಡ್ ಇಸಿಬಿಯ ಕನಸಿನ ಕೂಸಾಗಿದ್ದು, ಇದರಲ್ಲಿ 8 ತಂಡಗಳು ಭಾಗವಹಿಸಲಿವೆ. ಜುಲೈ 21ರಿಂದ ಓವೆಲ್ ಮತ್ತು ಮ್ಯಾಂಚೆಸ್ಟರ್ನಲ್ಲಿ ಮಹಿಳಾ ಪಂದ್ಯಗಳು ಆರಂಭವಾಗಲಿವೆ.
ಈ ಟೂರ್ನಿಗೂ ಮುನ್ನ ಭಾರತ ಮಹಿಳಾ ತಂಡ ಜೂನ್-ಜುಲೈನಲ್ಲಿ ಒಂದು ಟೆಸ್ಟ್, ಮೂರು ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ನಂತರ ಹಂಡ್ರೆಡ್ ಲೀಗ್ನಲ್ಲಿ 4 ಆಟಗಾರ್ತಿಯರು ಭಾಗವಹಿಸಲಿದ್ದಾರೆ.